ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ದಿಯ ನೂತನ ಸಂಘದ ಉದ್ಘಾಟನೆ ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್) ನೂತನ ಅಧ್ಯಕ್ಷರಿಗೆ ಸನ್ಮಾನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನಡೆಯಿತು.
ಬನ್ನೂರು ಮುಖ್ಯರಸ್ತೆಯ ದೇವೇಗೌಡ ವೃತ್ತದ ಬಳಿ ಇರುವ ಚಾಮುಂಡೇಶ್ವರಿ ಕನ್ವೆನ್ ಷನ್ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಮೈಮುಲ್ ನೂತನ ಅಧ್ಯಕ್ಷರಾದ ಆರ್.ಚೆಲುವರಾಜ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಮೈಮುಲ್ ಮಾಜಿ ಅಧ್ಯಕ್ಷರೂ ಹಾಲಿ ನಿರ್ದೇಶಕರೂ ಆದ ಪಿ.ಎಂ.ಪ್ರಸನ್ನ ಅವರು ಡಾ.ವರ್ಗೀಸ್ ಕುರಿಯನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು.
ಮೈಮುಲ್ ನಿರ್ದೇಶಕರಾದ ಎ.ಟಿ.ಸೋಮಶೇಖರ್ ಅವರು ಜಿಲ್ಲಾ ಮಟ್ಟದ ನೌಕರರ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟಿಸಿ, ಮಾತನಾಡಿದರು.
ಈ ವೇಳೆ ಮೈಮುಲ್ ನೂತನ ಅಧ್ಯಕ್ಷ ಚೆಲುವರಾಜ್ ಅವರು ಮಾತನಾಡಿ, ಅಧ್ಯಕ್ಷನಾಗಿ ಆಯ್ಕೆ ಮಾಡಿದ ಪ್ರತಿಯೋರ್ವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೂ ನನ್ನ ಅಧಿಕಾರವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಹಿರಿಯರ ಸಲಹೆ-ಸೂಚನೆಯನ್ನು ಸ್ವೀಕರಿಸಿ ಹಾಲು ಒಕ್ಕೂಟದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಮೈಸುರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಆರ್.ಮಂಗಳ ಅವರು ಮಾತನಾಡಿ, ಹಾಲು ಉತ್ಪಾದಕ ನೌಕರರ ಅಭಿವೃದ್ದಿ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವುದು ಸಂಘದ ಮೊದಲ ಆದ್ಯ ಕರ್ತವ್ಯವಾಗಿದ್ದು, ನೌಕರರ ಹಿತರಕ್ಷಣೆಗೆ ಸಂಘ ಬದ್ದವಿದೆ ಎಂದರು.
ಸಾಕಷ್ಟು ನೌಕರರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದ ಅವರು, ಅಂತವರ ನೆರವಿಗೆ ಸ್ಪಂದಿಸಲಾಗುವುದು. ಅಲ್ಲದೇ ನೌಕರರು ಅಕಾಲಿಕ ಮರಣಕ್ಕೀಡಾದರೇ ಅಥವಾ ಇನ್ನಾವುದೋ ಅಪಘಾತದಲ್ಲಿ ಗಾಯಗೊಂಡು ಸಂಕಷ್ಟದಲ್ಲಿದ್ದರೇ ಅಂತಹ ನೌಕರರಿಗೆ ಒಕ್ಕೂಟದ ವತಿಯಿಂದ ಹೆಚ್ಚಿನ ಪರಿಹಾರ ಒದಗಿಸಿಕೊಡುವ ಕಾರ್ಯಕ್ಕೆ ನೂತನ ಅಧ್ಯಕ್ಷರು ಮುಂದಾಗಬೇಕೆಂದು ಮನವಿ ಮಾಡಿದರಲ್ಲದೇ, ಅಂತೆಯೇ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ ಸೌಲಭ್ಯ ಒದಗಿಸಿಕೊಡುವ ವಿಚಾರವಾಗಿಯೂ ಗಮನ ಹರಿಸಬೇಕೆಂದು ಮತ್ತು ನೌಕರರ ಸಂಘದ ವತಿಯಿಂದಲೂ ಸಂಕಷ್ಟದಲ್ಲಿ ಇರುವವರಿಗೆ ಅಗತ್ಯ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕರುಗಳಾದ ಕೆ.ಜಿ.ಮಹೇಶ್, ಕೆ.ಉಮಾಶಣಕರ್, ಒಂ ಪ್ರಕಾಶ್, ಈರೇಗೌಡ, ಕೆ.ಎಸ್ ಕುಮಾರ್, ದಾಕ್ಷಾಯಿಣಿ, ಲೀಲಾ ಬಿ.ಕೆ.ನಾಗರಾಜ್, ನೀಲಾಂಬಿಕೆ ಮಹೇಶ್, ಎ.ಶಿವಗಾಮಿಷಣ್ಮುಗಂ, ಸದಾನಂದ, ಗುರುಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.