ಕನ್ನಡ ಚಿತ್ರರಂಗದ ಕ್ರೇಜಿ಼ಸ್ಟಾರ್, ಕನಸುಗಾರ, ಪ್ರೆಮಲೋಕದ ಸಾಹುಕಾರ ವಿ ರವಿಚಂದ್ರನ್ ಅವರಿಗೆ ಹ್ಯಾಪಿ ಬರ್ತ್ ಡೇ..

ಇಂದು ಕನ್ನಡ ಚಿತ್ರರಂಗದ ಕನಸುಗಾರ , ಬಹುಮುಖ ಪ್ರತಿಭೆ ವಿ.ರವಿಚಂದ್ರನ್ ಅವರ ಜನ್ಮದಿನ..

ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಕ್ರೇಜಿ಼ ಸ್ಟಾರ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು.

ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ…

ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ…

‘ರವಿಚಂದ್ರನ್’, ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಮಗ.

ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ.

ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.

ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.

ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು.

ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ.

ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು.

ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ಹಳ್ಳಿಸೊಗಡಿನ ‘ರಾಮಾಚಾರಿ’ ಸಿನಿಮಾದ ಮೂಲಕ ಹೆಸರಾದರು.

ಅವರ ಯಶಸ್ವಿ ಚಿತ್ರಗಳೆಂದರೆ..
ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ…

‘ರಾಮಾಚಾರಿ’ ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ.

ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ರವಿಚಂದ್ರನ್ ಸಿನಿಮಾಗಳು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತವೆ…

ಹಿಂದಿಯ ‘ಹೀರೋ’ ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಕುಂಚದಲ್ಲಿ ‘ರಣಧೀರ’ನಾದಾಗ, ಮೂಲನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು.

ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೆ ತಮ್ಮದೇ ಶೈಲಿಯಲ್ಲಿ ಕನ್ನಡೀಕರಣಗೊಳಿಸುವಲ್ಲಿ ಇವರು ನಿಸ್ಸೀಮರು.

ಹಾಗಾಗಿ, ರೀಮೇಕ್ ಗಳ ನಡುವೆ ರವಿಮೇಕ್ ಗಳು ವಿಶಿಷ್ಟವಾಗಿ ಎದ್ದುನಿಲ್ಲುತ್ತವೆ.

ಕನ್ನಡ ಚಿತ್ರರಂಗದ ದೇಸಿದೊರೆ, ನಾದಬ್ರಹ್ಮ ಹಂಸಲೇಖರವರನ್ನು ತಮ್ಮ ‘ಪ್ರೇಮಲೋಕ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಗೀತಪರಂಪರೆಯಲ್ಲೊಂದು ಹೊಸ ಸಂಚಲನ ಮೂಡಿಸಿದರು.

ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.’

ಪ್ರೇಮಲೋಕ’, ‘ರಣಧೀರ’ ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿವೆ. ಇಂದಿಗೂ ಎಫ಼್.ಎಮ್ ಹಾಗೂ ಟಿ.ವಿ. ವಾಹಿನಿಗಳಲ್ಲಿ ಇವರ ಹಾಡುಗಳದ್ದೆ ಸಿಂಹಪಾಲು. ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್…

ಪ್ರೇಮಕಥೆಗಳ ಬಹುತೇಕ ಕೋನಗಳನ್ನು ಮುಟ್ಟಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದು. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್. ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜಿ ಎಸ್ ವಿ ಸೀತಾರಾಂ ಅವರು ಇವರ ಬಹುಕಾಲದ ಛಾಯಾಗ್ರಾಹಕರಾಗಿದ್ದಾರೆ.

‘ನಾನು ನನ್ನ ಹೆಂಡ್ತೀರು’ ಚಿತ್ರದ ಮೂಲಕ ರವಿಚಂದ್ರನ್ ಸಂಗೀತ ನಿರ್ದೇಶಕರಾದರು. ನಂತರ ತೆರೆಕಂಡ ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ ಹದಿನೈದಕ್ಕು ಹೆಚ್ಚು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನವಿದೆ.

ಚೋರ ಚಿತ್ತಚೋರ ಚಿತ್ರದ ‘ದಿಲ್ಲು ದಿಲ್ಲು ಸೇರಿದಾಗ’ ಹಾಡು ಇವರು ಬರೆದ ಮೊದಲ ಸಾಹಿತ್ಯ…

ಕನ್ನಡ ಚಿತ್ರರಂಗ ಇಂದು ಉತ್ತುಂಗದಲ್ಲಿದೆ ಎಂದಾದರೆ ಅದರ ಬಹುಪಾಲು ರವಿಚಂದ್ರನ್ ಅವರದ್ದೆ ಎಂದರೆ ತಪ್ಪಾಗುವುದಿಲ್ಲ…

ಕನ್ನಡ ಚಿತ್ರಗಳ ಕನಸುಗಾರ , ಎಲ್ಲವನ್ನೂ ಮಾಡಬಲ್ಲೇ ಎಂಬ ಹಠವಾದಿ , ಪ್ರೆಮಲೋಕದ ಸಿಪಾಯಿ, ಪ್ರಿತ್ಸೋದು ತಪ್ಪಲ್ಲ ವೆಂದ ಚೋರಚಿತ್ತ ಚೋರ, ಶ್ರೀರಾಮಚಂದ್ರನಾದ ಹಳ್ಳಿ ಮೇಷ್ಟ್ರು , ಯುದ್ದ ಕಾಂಡದಲ್ಲಿ ಏಕಾಂಗಿ ಹೋರಾಡಿದ ರಣಧೀರ, ಅಹಂ ಪ್ರೇಮಾಸ್ಮೀ ಎಂದ ಯುಗಪುರುಷ ನಮ್ಮ ರಾಮಾಚಾರಿಗೆ ಹುಟ್ಟುಹಬ್ಬದ ಶುಭಾಶಯಗಳು ..
ಹ್ಯಾಪಿ ಬರ್ತ್ ಡೇ ರವಿ ಸರ್..
ವಿಶೇಷ ವರದಿ ಲೋಹಿತ್ ಹನುಮಂತಪ್ಪ ಮೈಸೂರು….

Leave a Reply

Your email address will not be published. Required fields are marked *

You cannot copy content of this page