ಖ್ಯಾತ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದ್ದು ತಕ್ಷಣ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.11.30 ರಿಂದ ಅವರನ್ನುತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು.
ವೈದ್ಯರ ತೀವ್ರ ಪ್ರಯತ್ನಗಳ ನಂತರವೂ ಹೃದಯವಂತನ ಹೃದಯ ಚಿಕಿತ್ಸೆಗೆ ಸ್ಪಂದಿಸದೆ ತನ್ನ ಕೆಲಸ ನಿಲ್ಲಿಸಿಯೇ ಬಿಟ್ಟಿತು.ಅತ್ಯದ್ಭುತ ನಟನೊಬ್ಬ ವಿಧಿಯ ಕರೆಗೆ ಓಗೊಟ್ಟು ಹೊರಟೆ ಬಿಟ್ಟರು.
1975 ರಲ್ಲಿ ಜನಿಸಿದ್ದ ಅವರು ತಮ್ಮ 46ವರ್ಷ ಗಳ ಪಯಣದಲ್ಲಿ 47 ಸಿನಿಮಾಗಳಲ್ಲಿ ನಟಿಸಿದ್ದರು.
ನಟನೆಯ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ,26 ಅನಾಥಾಶ್ರಮ, 45ಉಚಿತ ಶಾಲೆಗಳು, 16ವೃದ್ದಾಶ್ರಮ, 19 ಗೋಶಾಲೆಗಳು, 1800 ಮಕ್ಕಳಿಗೆ ಶಿಕ್ಷಣ ಹಾಗು ಮೈಸೂರಿನಲ್ಲಿ ಶಕ್ತಿಧಾಮ ಸಂಸ್ಥೆಯ ಹೆಣ್ಣುಮಕ್ಕಳ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರು.
ಯಾರೊಬ್ಬರೊಂದಿಗೂ,ಎಂದಿಗೂ ಸಣ್ಣ ಮನಸ್ತಾಪಗಳನ್ನು ಮಾಡಿಕೊಳ್ಳದ ಪುನೀತ್ ರಾಜ್ ಕುಮಾರ್ ಅಜಾತಶತ್ರು ಎಂದೇ ಹೆಸರಾಗಿದ್ದರು.ಅವರ ಅಗಲಿಕೆ ಚಿತ್ರರಂಗಕ್ಕೆ ಹಾಗು ಈ ಸಮಾಜಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ…
ಕನ್ನಡಿಗರ ಕಣ್ಮಣಿ, ಬಡವರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ ಅವರು ನಿರ್ಮಾಪಕರಾಗಿಯೂ ಸುದ್ದಿ ಮಾಡಿದ್ದರು. ಬಡವರು ಹಾಗೂ ಬಡ ಕಲಾವಿದರ ಪಾಲಿಗೆ ಆಪದ್ಬಾಂಧವರಾಗಿದ್ದ ಅವರ ಅಸ್ವಸ್ಥತೆಯ ಸುದ್ದಿ ಇಡೀ ಸ್ಯಾಂಡಲ್‍ವುಡ್‍ಗೆ ಸಿಡಿಲು ಬಡಿದಂತಾಗಿದೆ.
1975ರಲ್ಲಿ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಾಲನಟನಾಗಿ ಕಾಣಿಸಿಕೊಂಡಿದ್ದ ಅವರು ಮುಂದೆ 1983ರಲ್ಲಿ ಭಕ್ತ ಪ್ರಹ್ಲಾದ ಸಿನೆಮಾದಲ್ಲಿ ಅದ್ಭುತವಾಗಿ ನಟಿಸಿ ಗಮನ ಸೆಳೆದು ಪ್ರಶಸ್ತಿಗೂ ಭಾಜನರಾಗಿದ್ದರು.
ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ್ದ ಇವರು ರಾಜ್ ಕುಮಾರ್ ಅವರ ಪ್ರೀತಿಯ ಅಪ್ಪುವಾಗಿದ್ದರು.
ಬಳಿಕ ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕಕ್ಕೂ ಅಪ್ಪು ಆಗಿಯೇ ಕನ್ನಡಿಗರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.¬
ಹಲವಾರು ಸಿನಿಮಾ ಕಲಾವಿದರನ್ನು ಬೆಳೆಸಿರುವ ಇವರು ಯಾವುದೇ ಅಹಂ ಇಲ್ಲದೆ ಹೊಸಬರೊಂದಿಗೂ ಬೆರೆಯುತ್ತಿದ್ದರು.
ಹೊಸಬರಿಗೆ ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಶೂಟಿಂಗ್ ಸ್ಥಳ್ಕಕೂ ಬಂದು ಹುರಿದುಂಬಿಸುತ್ತಿದ್ದರು.
ಇವರು ನಿರ್ಮಾಣ ಕಾರ್ಯದಲ್ಲಿ ತೊಡಿಗಿಸಿಕೊಂಡಿರುವ ಕೊನೆಯ ಸಿನಿಮಾ ಸತ್ಯಪ್ರಕಾಶ್ ನಿರ್ದೇಶನದ ಮ್ಯಾನ್ ಆಫ್ ದ ಮ್ಯಾಚ್ ಆಗಿತ್ತು.
ಈ ಸಿನೆಮಾ ಮುಂದಿನ ತಿಂಗಳು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿತ್ತು.
ಚಿತ್ರೋದ್ಯಮವೇ ಕಂಗಾಲು
ಪುನೀತ್ ಈಗಾಗಲೇ ಕೆಲವು ಸಿನಿಮಾದಲ್ಲಿ ನಟಿಸುತ್ತಿದ್ದು, ಅದು ಅರ್ಧದಲ್ಲೇ ಉಳಿದಿದೆ. ಇವರು ನಿರ್ಮಾಣ ಮಾಡುತ್ತಿರುವ ಕೆಲವು ಸಿನಿಮಾಗಳು ಹಾಗೂ ನಡೆಸಿಕೊಡುವ ರಿಯಾಲಿಟಿಶೋಗಳೂ ಇವೆ. ಇವೆಲ್ಲ ಪುನೀತ್ ಇಲ್ಲದೆ ಅನಾಥವಾಗುವ ಸ್ಥಿತಿ ನಿರ್ಮಾಣವಾಗಲಿದೆ. ಜತೆಗೆ ಇಡೀ ಚಿತ್ರರಂಗದ ಮುಂದೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಪುನೀತ್ ಅವರು ತೆಲುಗು ,ತಮಿಳು , ಹಿಂದಿ , ಮಲೆಯಾಳಂ ಚಿತ್ರರಂಗದ ಜೊತೆಗೂ ಉತ್ತಮ ಭಾಂದವ್ಯ ಹೊಂದಿದ್ದರು,
ತುಳು ಚಿತ್ರವೊಂದನ್ನು ಹಾಡಿದ್ದರಲ್ಲದೆ, ತುಳು ಸಿನಿಮಾ ರಂಗದೊಂದಿಗೂ ಉತ್ತಮ ಸಂಬಂಧ ಇರಿಸಿಕೊಂಡಿದ್ದರು. ಅವರ ಪಿಆರ್‍ಕೆ ಆಡಿಯೋ ಮೂಲಕವೂ ಕೋಸ್ಟಲ್‍ವುಡ್‍ನಲ್ಲಿ ಪಾಲು ಪಡೆದುಕೊಂಡಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಲಾವಿದರ ಸಮಸ್ಯೆಗೆ ಸ್ಪಂದನೆ
ಪುನೀತ್ ಅವರು ಕೊರೊನಾ ಸಂದರ್ಭ ಸಹಿತ ಎಲ್ಲ ಕಾಲದಲ್ಲೂ ಬಡ ಕಲಾವಿದರ ಜತೆಗಿದ್ದರು. ಅವರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.
ಪುನೀತ್ ಅಗಲಿಕೆ ಕಾರಣದಿಂದ ಇಡೀ ಕರುನಾಡು ಕಣ್ಣೀರಾಕಿದೆ. ತಮ್ಮ ಆಪ್ತ ನಟನನ್ನು ಕಾಣಲು ಆಸ್ಪತ್ರೆಗೆ ಧಾವಿಸಿ ಬಂದವರ ಸಂಖ್ಯೆ ಅಪಾರ. ರಾಜ್ಯಾದ್ಯಂತ ಶುಕ್ರವಾರ ಅಪರಾಹ್ನ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಅಭಿಮಾನಿಗಳು ಕೆಲಸಕ್ಕೆ ರಜೆ ಪಡೆದು ಆಸ್ಪತ್ರೆ ಹಾಗೂ ಪುನೀತ್ ಮನೆಯ ಕಡೆಗೆ ಹೊರಟಿದ್ದಾರೆ.
ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ…
ಒಟ್ಟಾರೆ ಬಾಲಕನಾಗಿದ್ದಾಗಲೇ ರಾಷ್ಟ್ರ ಪ್ರಶಸ್ತಿ ಪಡೆದ ಪುನಿತ್ ರಾಜ್ ಕುಮಾರ್ , ಪ್ರತಿಭಾನ್ವಿತ ಕಲಾವಿದ , ಅವರು ಅಗಲಿರುವುದು ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ..
ಅವರಂತ ಪವರ್ ಫುಲ್ ಸ್ಟಾರ್ ಮತ್ಯಾರು ನಮಗೆ ಸಿಗಲಾರರು
ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ
ಹೋಗಿ ಬನ್ನಿ ಪುನಿತ್ ಸರ್ …
ಲೋಹಿತ್ ಹನುಮಂತಪ್ಪ ಮೈಸೂರು…