ಲೋಹಿತ್ ಹನುಮಂತಪ್ಪ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಮೊದಲ ಬಾರಿಗೆ ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್ ಅಕ್ಟೋಬರ್ 3ರಿಂದ 9 ದಿನಗಳವರೆಗೆ ಅರಮನೆಯಲ್ಲಿ ನಡೆಯಲಿದೆ.
ರತ್ನ ಖಚಿತ ಸಿಂಹಾಸನಾರೂಢರಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್ ಹಾಲ್ನಲ್ಲಿ ಇರಲಿದೆ.
*ಸಿಂಹಾಸನದ ಬಿಡಿ ಭಾಗಗಳು*
ಸಿಂಹಾಸನವನ್ನು 8, ಬೆಳ್ಳಿ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ, ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜತೆ ನಗಗಳು, 1 ಜತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು.
ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಪೂರ್ಣಗೊಳ್ಳುತ್ತದೆ. ಸಿಂಹವನ್ನು ಅಕ್ಟೋಬರ್3ರಂದು ಜೋಡಿಸಿ ಪೂರ್ಣಗೊಂಡ ಸಿಂಹಾಸನವನ್ನು ದರ್ಬಾರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ನವರಾತ್ರಿ ಮೊದಲ ದಿನವಾದ ಅ.3ರಂದು ಸಿಂಹಾಸನಕ್ಕೆ ಸಿಂಹ ಜೋಡಣಾ ಕಾರ್ಯ ನಡೆದ ನಂತರ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಮಧ್ಯಾಹ್ನದವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಆಯುಧ ಪೂಜೆ ದಿನವಾದ ಅ.11ರಂದು ಮಧ್ಯಾಹ್ನದವರೆಗೆ ಹಾಗೂ ವಿಜಯದಶಮಿ ದಿನವಾದ ಅ.12ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.