ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ವಿವಿಸಿಇ) ಆವರಣದಲ್ಲಿ ಜ. 27 ರಂದು ಬೆಳಗ್ಗೆ 9 ಗಂಟೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು “ಎವೆಂಚರ್ ಆಟೋಡೆಸ್ಕ್ ಸೆಂಟರ್ ಆಫ್ ಎಕ್ಸಲೆನ್ಸ್” ಅನ್ನು ಉದ್ಘಾಟಿಸಲಿದ್ದಾರೆ.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎನ್ವೆಂಚರ್ ಇಂಜಿನಿಯರಿಂಗ್ ಸಿಇಒ ಮತ್ತು ಅಧ್ಯಕ್ಷ ಅನಿಲ್ ಶಿವದಾಸ್, “ಕರ್ನಾಟಕ ಸರ್ಕಾರದ ಬೆಂಗಳೂರು ಬಿಯಾಂಡ್ ಯೋಜನೆಯನ್ನು ಎರಡನೇ ಹಂತದ ನಗರಗಳಿಗೆ ವಿಸ್ತರಣೆ ಮಾಡಬೇಕೆಂಬ ಉದ್ದೇಶದಿಂದ ಮೊದಲ ಹೆಜ್ಜೆಯಾಗಿ ಎನ್ವೆಂಚರ್ ಅಟೋಡೆಸ್ಕ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮಾಡಲಾಗಿದೆ. ಈ ಸೌಲಭ್ಯವು ಬಹುಮಹಡಿ ಕಟ್ಟಡಗಳು, ಕ್ರೀಡಾಂಗಣಗಳು, ಹೋಟೆಲ್‌ಗಳು ಮತ್ತು ಆಸ್ಪತ್ರೆಗಳನ್ನು ಒಳಗೊಂಡಿದ್ದು, ಅಮೆರಿಕಾದ ಗ್ರಾಹಕರನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಇದು ಮೈಸೂರಿನಲ್ಲಿ ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಮಾಹಿತಿ ನೀಡಿದರು.
1997 ರಲ್ಲಿ ಸ್ಥಾಪನೆಯಾದ ಎನ್ವೆಂಚರ್ ಯುಎಸ್ಎ, ಕೆನಡಾ ಮತ್ತು ಯುರೋಪ್ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಒದಗಿಸಲಾಗುತ್ತಿದೆ. ಕಾಲೇಜಿನ ಸಹಯೋಗದೊಂದಿಗೆ ಸ್ಥಾಪಿಸಲಾದ VVCE ಯಲ್ಲಿನ ಹೊಸ ಸೌಲಭ್ಯವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸುಧಾರಿತ ಉಪಕರಣಗಳು ಮತ್ತು ತಂತ್ರಜ್ಞಾನಗಳ ಕುರಿತು ವಿಶೇಷ ತರಬೇತಿಯನ್ನು ನೀಡುತ್ತದೆ. ಇದು ಸಿವಿಲ್, ಎಲೆ ಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಸ್ಥಳೀಯ ಪ್ರತಿಭೆಗಳನ್ನು ಮತ್ತಷ್ಟು ಪೋಷಿಸಲು ಮತ್ತು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ” ಎಂದು ಅನಿಲ್ ಶಿವದಾಸ್ ತಿಳಿಸಿದರು

ಈ ಒಡಂಬಡಿಕೆ ಕುರಿತು ವಿವಿಸಿಇ ಪ್ರಾಂಶುಪಾಲ ಸದಾಶಿವೇಗೌಡ ಮಾತನಾಡಿ, ಕಳೆದ ವರ್ಷ ಎನ್ವೆಂಚರ್‌ನೊಂದಿಗೆ ಒಡಂಬಡಿಕೆಗೆ ನಾವು ಸಹಿ ಹಾಕಿದ್ದೇವೆ. ಇದರ ಭಾಗವಾಗಿ ಏಳನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ಜೊತೆ ಸಂಬಳ ನೀಡಲಾಗುತ್ತದೆ. ಪ್ರತಿ ವರ್ಷ ಸುಮಾರು 30 ರಿಂದ 35 ವಿದ್ಯಾರ್ಥಿಗಳಿಗೆ ಉತ್ತಮ ಸಂಬಳದೊಂದಿಗೆ ಪೂರ್ಣಾವಧಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಮುಂಬರುವ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಿದ್ದೇವೆ” ಎಂದು ಹೇಳಿದರು.

“ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮದಲ್ಲಿ ಹೆಸರು ಮಾಡಿರುವ ನಾಯಕರು, ಸ್ಥಳೀಯ ಸಮುದಾಯದ ಸದಸ್ಯರು, ಸಾಹಸೋದ್ಯಮ ಉದ್ಯೋಗಿಗಳು ಮತ್ತು VVCE ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೈಸೂರಿನಲ್ಲಿ ಶೈಕ್ಷಣಿಕ ಮತ್ತು ಬೆಳೆಯುತ್ತಿರುವ ಪರಿಸರ ಸ್ನೇಹಿ ತಂತ್ರಜ್ಞಾನ ವ್ಯವಸ್ಥೆಯನ್ನು ಕಾಪಾಡುತ್ತದೆ. ನಗರವನ್ನು ನಾವೀನ್ಯತೆ ಮತ್ತು ಪ್ರತಿಭಾವಂತರ ಕೇಂದ್ರವಾಗಿ ರೂಪುಗೊಳ್ಳಲು ಸಹಕಾರ ನೀಡುತ್ತದೆ” ಎಂದು ತಿಳಿಸಿದರು.