ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಲಾಭ ಪಡೆದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಕಾನೂನುಬಾಹಿರವೆಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ರೆ, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಲಿದ್ದಾರೆ. ಕ್ಯಾಬಿನೆಟ್ ಸಲಹೆ ಧಿಕ್ಕರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಹಾಗೂ ತಮ್ಮ ಆದೇಶಕ್ಕೆ ವಿವರವಾದ ಕಾರಣಗಳನ್ನು ರಾಜ್ಯಪಾಲರು ಕೊಟ್ಟಿಲ್ಲವೆಂಬುದನ್ನು ಪ್ರಧಾನವಾಗಿ ಉಲ್ಲೇಖಿಸಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಅಲ್ಲದೇ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿಯೇ ತನಿಖೆಗೆ ಅನುಮತಿ ಕೇಳಬೇಕೇ ವಿನಹ ಖಾಸಗಿ ದೂರುದಾರರಲ್ಲ ಎಂಬುದನ್ನೂ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ರಾಜ್ಯಪಾಲರು ನೀಡಬಹುದಾದ ಕೌಂಟರ್ ಏನು ಎನ್ನುವುದು ಇಂದು ತಿಳಿಯಲಿದೆ. ಇಂತಹ ವಿಚಾರಗಳಲ್ಲಿ ಕ್ಯಾಬಿನೆಟ್ ತೀರ್ಮಾನವನ್ನು ರಾಜ್ಯಪಾಲರು ಪಾಲಿಸಬೇಕಿಲ್ಲವೆಂದು ಸಾಲಿಸಿಟರ್ ಜನರಲ್ ಈಗಾಗಲೇ ವಾದಿಸಿದ್ದಾರೆ.
ಹೈಕೋರ್ಟ್ ಇಂದೇ ವಿಚಾರಣೆ ಪೂರ್ಣಗೊಳಿಸಿದ್ರೆ ಆದೇಶವನ್ನು ಕಾಯ್ದಿರಿಸುವ ಸಾಧ್ಯತೆಗಳು ಹೆಚ್ಚಿವೆ. ಅಂತಹ ಸಂದರ್ಭದಲ್ಲಿ ಹೈಕೋರ್ಟ್ ನೀಡಬಹುದಾದ ಮಧ್ಯಂತರ ಆದೇಶ ಸಿಎಂಗೆ ಭವಿಷ್ಯವನ್ನು ನಿರ್ಧರಿಸಲಿದೆ. ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ರ ಖಾಸಗಿ ದೂರುಗಳ ಭವಿಷ್ಯವನ್ನೂ ಕೋರ್ಟ್ ತೀರ್ಮಾನಿಸಲಿದೆ.
ಒಂದು ವೇಳೆ ವಿರುದ್ಧವಾದ ಆದೇಶ ಬಂದರೆ ಮೇಲ್ಮನವಿ ಸಲ್ಲಿಸಲು ವಾದಿ ಸಿದ್ದರಾಮಯ್ಯ ಪ್ರತಿವಾದಿಯಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳೂ ಸಿದ್ಧತೆ ನಡೆಸಿದ್ದಾರೆ.