ಮೈಸೂರು: ದೇಶಾದ್ಯಂತ ಹೆಚ್ಚಿನ ಗತಿಯಲ್ಲಿ ಏರುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಎಲ್ಲಾ ಅರ್ಹ ಉದ್ಯೋಗಿಗಳಿಗೆ ಲಸಿಕೆ ನೀಡುವುದನ್ನು ಖಚಿತಪಡಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು, ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ 45 ವರ್ಷ ಹಾಗು ಅದಕ್ಕಿಂತ ಹೆಚ್ಚಿನ ವಯಸ್ಸಿನ ಉದ್ಯೋಗಿಗಳಿಗೆ ಮತ್ತು ಹೆಚ್ಚಿನ ಅಪಾಯದ ಅಡಿಯಲ್ಲಿ ಬರುವ ಅರ್ಹ ಮುಂಚೂಣಿ ಉದ್ಯೋಗಿಗಳ ಫಲಾನುಭವಿಗಳಿಗೆ, ವಯಸ್ಸಿನ ಪರಿಗಹಣೆಯಿಲ್ಲದೆ, ಕೆಲಸದ ಸ್ಥಳದಲ್ಲಿಯೇ COVID-19 ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದು ಪ್ರಾರಂಭಿಸಿತು.
ಲಸಿಕೆ ನೀಡುವ ಮೊದಲು ಎಲ್ಲಾ ಉದ್ಯೋಗಿಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲಾಗುತ್ತಿದೆ ಮತ್ತು ಲಸಿಕಾ ಸ್ಥಳದಲ್ಲಿ ಎಲ್ಲಾ ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆ. ಇದೇ ರೀತಿಯ ಲಸಿಕಾ ಕಾರ್ಯಕ್ರಮಗಳನ್ನು ಇತರೆ ಪ್ರಮುಖ ಕೆಲಸದ ಸ್ಥಳಗಳಲ್ಲಿ ಮತ್ತು ಶಿವಮೊಗ್ಗ, ಹರಿಹರ, ಅರಸೀಕೆರೆ, ಸಕಲೇಶಪುರ ಮುಂತಾದ ರೈಲ್ವೆ ನಿಲ್ದಾಣಗಳಲ್ಲಿ ಸಹ ನಡೆಸಲಾಗುತ್ತಿದೆ.
ನೈಋತ್ಯ ರೈಲ್ವೆಯಲ್ಲಿ ಮುಂಚೂಣಿ ಸಿಬ್ಬಂದಿಗೆ ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲ ವಿಭಾಗ ಮೈಸೂರು. ಇಂದಿನ ದಿನಾಂಕದಂತೆ ಮೈಸೂರು ವಿಭಾಗವು ಅರ್ಹ ಉದ್ಯೋಗಿಗಳಿಗೆ, ಮುಂಚೂಣಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕೊಮೊರ್ಬಿಡಿಟಿ ಇರುವ ನಿವೃತ್ತ ನೌಕರರು ಹಾಗು ಅವರ ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರು ಸೇರಿದಂತೆ ಒಟ್ಟು 2419 ಪ್ರಮಾಣಗಳಷ್ಟು ಲಸಿಕೆಯನ್ನು ನೀಡಿದೆ.
ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ, ಮೈಸೂರಿನ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಡಾ.ಜಿ.ಎಸ್.ರಾಮಚಂದ್ರ ರವರು ರೋಗನಿರೋಧಕ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು ಮತ್ತು ಕೆಲಸದ ಸ್ಥಳಗಳಲ್ಲಿ ಈ ರೀತಿಯ ಲಸಿಕಾ ಕಾರ್ಯಕ್ರಮಗಳನ್ನು ವಿಭಾಗದಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.