ಮೈಸೂರು: ಜಿಲ್ಲೆಯಲ್ಲಿರುವ ಮೆಡಿಕಲ್ ಆಕ್ಸಿಜನ್ ಉತ್ಪಾದಕರು ಮತ್ತು ರಿಫಿಲರ್ ಸಂಸ್ಥೆಗಳೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಆಕ್ಸಿಜನ್ ನೀಡಬೇಕು. ವೈದ್ಯಕೀಯ ಉದ್ದೇಶಕ್ಕೆ ಮತ್ತು ಸರ್ಕಾರ ತಿಳಿಸುವ ಸಂಸ್ಥೆಗಳಿಗೆ ಮಾತ್ರ ಆಕ್ಸಿಜನ್ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ಕಾರದ ಮಾರ್ಗಸೂಚಿಯ ಪಾಲನೆ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಕ್ಸಿಜನ್ ಉತ್ಪಾದಕ ಮತ್ತು ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಗಳಿಗೆ ಒಬ್ಬೊಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಗೆ ಅಗತ್ಯವಿರುವ ಮೆಡಿಕಲ್ ಆಕ್ಸಿಜನ್ ಪೂರೈಸುವುದು ಈ ಸಂಸ್ಥೆಗಳು ಡ್ರಗ್ಸ್ ಕಂಟ್ರೋಲರ್ ಜವಾಬ್ದಾರಿ, ಯಾವ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗಬಾರದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್. ಮಂಜುನಾಥಸ್ವಾಮಿ, ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜು ಉಪಸ್ಥಿತರಿದ್ದರು.
ಮೆಡಿಕಲ್ ಆಕ್ಸಿಜನ್ ರೀಫಿಲ್ ಮಾಡುವ ಸಂಸ್ಥೆಗಳಾದ ಪದಕಿ ಏರ್ ಪ್ರಾಡಕ್ಟ್ಸ್ , ದಿ ಸದರನ್ ಗ್ಯಾಸ್ ಲಿಮಿಟೆಡ್, ಮಹತಿ ಆಕ್ಸಿಜನ್ ಕಂಪನಿ, ಪೀಣ್ಯ ಇಂಡಸ್ಟ್ರಿಯಲ್ ಗ್ಯಾಸೆಸ್, ಮತ್ತು ಮಂಗಳ ರವಿ ಎಂಟರ್‌ಪ್ರೈಸೆಸ್ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.