ಇಂದು ವಿಶ್ವ ವ್ಯಂಗ್ಯ ಚಿತ್ರಕಾರರ ದಿನ..
ಹಾಸ್ಯದ ಮೂಲಕ ಸಮಾಜದಲ್ಲಿನ ಸ್ಥಿತಿಗತಿಯನ್ನು ಬರೀ ರೇಖೆಗಳಲ್ಲೇ ಜನರಿಗೆ ಮನದಟ್ಟು ಮಾಡಿಸುವ ವ್ಯಂಗ್ಯ ಚಿತ್ರಗಳು ಸದಾ ವಿಶೇಷ ಮತ್ತು ವಿಭಿನ್ನ.
ದೈನಂದಿನ ಬದುಕಿನ, ಸಮಾಜದ ಹಾಗೂ ಪ್ರಚಲಿತ ವಿದ್ಯಮಾನಗಳ ಹಲವು ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗ್ರಹಿಸಿ ಚಿತ್ರಗಳ ಮೂಲಕ ಹಾಸ್ಯದ ರೂಪದಲ್ಲಿ ಹೇಳುವ ಕಲೆಗೆ ವ್ಯಂಗ್ಯ ಚಿತ್ರವೆನ್ನುತ್ತಾರೆ.
ಇಂದು ಮಾಧ್ಯಮದ ಒಂದು ಭಾಗವೇ ಆಗಿರುವ ವ್ಯಂಗ್ಯ ಚಿತ್ರಗಳು ಬಳಕೆಯಾಗದ ಜಾಗಗಳಿಲ್ಲ.
ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ವ್ಯಂಗ್ಯ ಚಿತ್ರಕ್ಕೆ ತನ್ನದೇ ಆದ ಪ್ರತ್ಯೇಕ ಸ್ಥಾನವಿದೆ.
*ವ್ಯಂಗ್ಯ ಚಿತ್ರಕಾರರ ದಿನದ ಇತಿಹಾಸ*
ಇಂದು ವಿಶ್ವ ವ್ಯಂಗ್ಯ ಚಿತ್ರಕಾರರ ದಿನವನ್ನು ಆಚರಿಸಲು ಮುಖ್ಯ ಕಾರಣ ಅಮೆರಿಕಾದ ಖ್ಯಾತ ವ್ಯಂಗ್ಯ ಚಿತ್ರಕಾರ ರಿಚರ್ಡ್ ಎಫ್. ಔಟ್‌ಕಾಲ್ಟ್.
ಇವರು ಮೇ 05,1895ರಲ್ಲಿ ಬರೆದ ವ್ಯಂಗ್ಯ ಚಿತ್ರ ಒಂದು ಕ್ರಾಂತಿಯನ್ನೇ ಮಾಡಿತು,
ಜೋಸೆಫ್ ಪುಲಿಟ್ಜರ್ ಒಡೆತನದ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯಲ್ಲಿ ಈ ಕಾರ್ಟೂನು ಪಾತ್ರ ಜನಪ್ರಿಯವಾಗಿತ್ತು.
‘ಹೋಗನ್ಸ್ ಆಲೇ’ ಎಂಬ ಹೆಸರಿನಲ್ಲಿ ರಿಚರ್ಡ್ ಎಫ್ ಔಟ್ಕಾಲ್ಟ್ ರಚಿಸುತ್ತಿದ್ದ ಕಾರ್ಟೂನ್ ಸರಣಿಯಲ್ಲಿ ಈ ‘ಯಲ್ಲೋ ಕಿಡ್’ ಒಂದು ಪಾತ್ರವಾಗಿತ್ತು.
ಬೊಕ್ಕ ತಲೆ, ಮುಂದೆ ಬಾಗಿದ ಎರಡು ಹಲ್ಲುಗಳು, ಚಪ್ಪಲಿಯಿಲ್ಲದ ಕಾಲುಗಳು, ಮೇಲೊಂದು ದೊಗಲೆ ಅಂಗಿ ಈತನ ಯೆಲ್ಲೋ ಕಿಡ್ನ ವಿಶೇಷತೆಗಳು.
ಈ ಹುಡುಗ ಹಳದಿ ಅಂಗಿ ತೊಟ್ಟು 1895ರಿಂದ 1898ರವರೆಗೆ ನ್ಯೂಯಾರ್ಕ್ ವರ್ಲ್ಡ್ ಪತ್ರಿಕೆಯ ವ್ಯಂಗ್ಯ ಚಿತ್ರಗಳಲ್ಲಿ ಮಿಂಚುತ್ತಿದ್ದ.
ವಾರದ ರಜಾದಿನದಲ್ಲಿ ಪೂರ್ತಿ ಒಂದು ಪುಟದ ಕಾರ್ಟೂನ್ ಪ್ರಕಟವಾಗುತ್ತಿತ್ತು. 1990 ರಲ್ಲಿ ನ್ಯಾಷನಲ್ ಕಾರ್ಟೂನಿಸ್ಟ್ ಸೊಸೈಟಿಯು ಈ ದಿನವನ್ನು ವಿಶ್ವ ವ್ಯಂಗ್ಯ ಚಿತ್ರಕಾರರ ದಿನ ಎಂದು ಘೋಷಿಸಿ ಆಚರಿಸುತ್ತ ಬಂದಿದೆ.
ಎಲ್ಲಾ ಚಿತ್ರಕಾರರು ವ್ಯಂಗ್ಯ ಚಿತ್ರಗಳನ್ನು ಬರೆಯಲು ಸಾಧ್ಯವಿಲ್ಲ, ಯಾರಿಗೆ ಹಾಸ್ಯದ ಮನೋಭಾವವಿರುತ್ತದೋ ಅವರು ವ್ಯಂಗ್ಯ ಚಿತ್ರಗಳನ್ನು ಬರೆಯಬಹುದು.
ವ್ಯಂಗ್ಯ ಚಿತ್ರಕಾರ, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ದೈನಂದಿನ ವಾರ್ತೆಗಳ ಪರಿಚಯ, ವ್ಯಕ್ತಿಗಳ ಕಾರ್ಯ ಪರಿಚಯ, ಸನ್ನಿವೇಶದ ಗಂಭೀರತೆಯನ್ನು ಅರಿಯುವ ಶಕ್ತಿಗಳನ್ನು ಹೊಂದಿರಬೇಕು. ಒಂದು ವಿಮರ್ಶೆ ಲೇಖನ ನೀಡಬಹುದಾದ ಅಂಶವನ್ನು ವ್ಯಂಗ್ಯಚಿತ್ರ ನೀಡುತ್ತದೆ.
ದೇಶದ ಮೊದಲ ವ್ಯಂಗ್ಯಚಿತ್ರಕಾರರ ಸಂಸ್ಥೆ ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯು 8ನೇ ಆಗಸ್ಟ್ 2001ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
ಅಂದಿನ ರಾಜ್ಯಪಾಲರಾದ ವಿ.ಎಸ್.ರಮಾದೇವಿ ಇದನ್ನು ಉದ್ಘಾಟಿಸಿದ್ದರು.
ಆಗ ಸಂಸ್ಥೆಯ ಅಧ್ಯಕ್ಷರಾಗಿದ್ದವರು ಖ್ಯಾತ ವ್ಯಂಗ್ಯಚಿತ್ರಕಾರ ಬಿ.ವಿ.ರಾಮಮೂರ್ತಿ.
ಭಾರತದ ಖ್ಯಾತ ವ್ಯಂಗ್ಯ ಚಿತ್ರಕಾರರು ಕೆ.ಶಂಕರ್ ಪಿಳ್ಳೈ, ಆರ್.ಕೆ.ಲಕ್ಷಣ್, ಮಾರಿಯೋ ಮಿರಾಂಡ, ಪರೇಶ್ ನಾಥ್, ವಿಜಯ್ ನಾರಾಯಣ್, ಶಂಕರ್ ಕುಟ್ಟಿ ನಾಯರ್, ಅಬು ಅಬ್ರಹಂ, ಹರೀಶ್ ಚಂದ್ರ ಶುಕ್ಲ ಮುಂತಾದವರು….
ಎಲ್ಲಾ ವ್ಯಂಗ್ಯಚಿತ್ರಕಾರರಿಗೆ ವಿಶ್ವ ವ್ಯಂಗ್ಯಚಿತ್ರಕಾರರ ದಿನಾಚರಣೆಯ ಶುಭಾಶಯಗಳು.