ನಾಲ್ಕು ವರ್ಷಕ್ಕೊಮ್ಮೆ ನಡೆಸುವ ಹುಲಿಗಳ ಗಣತಿಯ ಮಾಹಿತಿ ಬಹಿರಂಗಕ್ಕೂ ಮುನ್ನವೇ ಕರ್ನಾಟಕ ಮತ್ತೊಮ್ಮೆ ಹುಲಿಗಳ ರಾಜಧಾನಿಯಾಗಿ ಹೊರ ಹೊಮ್ಮಲಿದೆ ಎಂದು ವನ್ಯಜೀವಿ ತಜ್ಞರು ಅಂದಾಜಿಸಿದ್ದಾರೆ.
ಕಳೆದ 2018ರ ಹುಲಿ ಗಣತಿ ಮಾಹಿತಿ ಪ್ರಕಾರ ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳಿವೆ. ಆದರೆ, ಈ ಬಾರಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಮಧ್ಯಪ್ರದೇಶವನ್ನು ಹಿಂದಿಕ್ಕಿ ಮತ್ತೆ ನಂಬರ್ 1 ಸ್ಥಾನಕ್ಕೆ ಏರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕರ್ನಾಟಕವು 2010 ಹಾಗೂ 2014ರ ಗಣತಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನ ಗಳಿಸಿತ್ತು.
ಕರ್ನಾಟಕದಲ್ಲಿ ಇದುವರೆಗೆ ನಡೆದ ಸಮೀಕ್ಷೆ, ಆಂತರಿಕ ವರದಿ ಸೇರಿ ಹಲವು ಮಾಹಿತಿ ಆಧರಿಸಿ ತಜ್ಞರು ಹುಲಿಗಳ ಸಂಖ್ಯೆ ಕುರಿತು ಅಂದಾಜಿಸಿದ್ದಾರೆ.
ಮಾಹಿತಿ ವಿಶ್ಲೇಷಣೆ ಪ್ರಕಾರ ನಾಲ್ಕು ವರ್ಷದಲ್ಲಿ ರಾಜ್ಯಾದ್ಯಂತ ಹುಲಿಗಳ ಸಂಖ್ಯೆ ಶೇ. 5 – 10 ರಷ್ಟು ಏರಿಕೆಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಸಂಘರ್ಷಕ್ಕಿಳಿಯುವ, ದಾಳಿ ಮಾಡುವ ಹುಲಿಗಳನ್ನು ಕಡಿಮೆ ಹುಲಿಗಳು ಇರುವ ಪ್ರದೇಶಕ್ಕೆ ಸಾಗಿಸದೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಿದ್ದೇ ಇದಕ್ಕೆ ಕಾರಣ’ ಎಂದು ಹೇಳಲಾಗಿದೆ,
ಹುಲಿ ರಕ್ಷಣೆ ಹೋರಾಟಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾಳಿ, ರಾಮ ನಗರದ ಮಲೆ ಮಹದೇಶ್ವರ ಬೆಟ್ಟ /ಕಾವೇರಿ, ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲಿದೆ.
ಬಂಡೀಪುರ ಅರಣ್ಯ ಪ್ರದೇಶದಲ್ಲಿಯೇ ಹುಲಿಗಳ ಸಂಖ್ಯೆ 200 ದಾಟಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಹುಲಿ ದಿನವಾದ ಜುಲೈ 29 ಅಥವಾ ನವೆಂಬರ್‌ನಲ್ಲಿ ಗಣತಿ ಬಹಿರಂಗವಾಗುವ ಸಾಧ್ಯತೆ ಇದೆ.
‘ಕರ್ನಾಟಕದಲ್ಲಿ 36 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇದರ 4 ಲಕ್ಷ ಹೆಕ್ಟೇರ್‌ನಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ.
ಇದಲ್ಲದೆ, ಹುಲಿಗಳ ಆವಾಸ ಸ್ಥಾನ ಗುರುತಿಸಿ ಅವುಗಳ ರಕ್ಷಣೆ, ಸಂತತಿ ಹೆಚ್ಚಳದ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಒಟ್ಟಾರೆ ಅಂತಾರಾಷ್ಟ್ರೀಯ ಹುಲಿ ದಿನದಂದು ಹೊರ ಬೀಳುವ ಹುಲಿ ಗಣತಿ ಮಾಹಿತಿಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೆ ಇದೆ.