ಎಲ್ಲಾ ಪಂದ್ಯಗಳು ರದ್ದು ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ನಿರಾಶೆ

ಇಂಡಿಯನ್ ಪ್ರೀಮಿಯರ್ ಲೀಗ್ IPL 14ನೇ ಆವೃತ್ತಿ ಉಳಿದ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಹೇಳಿದ್ದಾರೆ…

ಮೂರು ಫ್ರಾಂಚೈಸಿಯ ನಾಲ್ಕು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ನಡುವೆ ಐಪಿಎಲ್ ರದ್ದುಕೋರಿ ಬಾಂಬೆ ಹೈಕೋರ್ಟ್, ದೆಹಲಿ ಹೈಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.

ಆಟಗಾರರ ಬಯೋ ಬಬಲ್, ಕೊವಿಡ್ ಸುರಕ್ಷತೆಗೆ ಬಳಸಿರುವ ಸಂಪನ್ಮೂಲಗಳನ್ನು ಹಿಂಪಡೆದು ಜನ ಸಾಮಾನ್ಯರಿಗೆ ಒದಗಿಸುವುದು ಸೂಕ್ತ ಎಂದು ಪಿಐಎಲ್ ನಲ್ಲಿ ಕೋರಲಾಗಿದೆ.

ಮೊದಲ ಹಂತದಲ್ಲಿ ಮುಂಬೈ, ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆಸಲಾಗಿತ್ತು. ನಂತರ ದೆಹಲಿ, ಅಹಮದಾಬಾದ್ ಕ್ರೀಡಾಂಗಣಗಳಲ್ಲಿ ನಿಗದಿಯಾಗಿತ್ತು.

ಕೋಲ್ಕತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಿಗೆ ಮೊದಲಿಗೆ ಸೋಂಕು ಕಾಣಿಸಿಕೊಂಡಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೂ ಕೋವಿಡ್ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಇದಾದ ಬಳಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಮಿತ್ ಮಿಶ್ರಾ, ಸನ್ ರೈಸರ್ಸ್ ಹೈದರಾಬಾದಿನ ವೃದ್ಧಿಮಾನ್ ಸಹಾ ಅವರಿಗೂ ಸೋಂಕು ತಗುಲಿಸಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಬಯೋ ಬಬಲ್ ಸುರಕ್ಷತೆ ಮೀರಿ ಸೋಂಕು ಕಾಣಿಸಿಕೊಂಡಿದ್ದರಿಂದ ಮೇ 3ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲಾಗಿತ್ತು.

ಕ್ರಿಕೆಟರ್ಸ್ ಅಲ್ಲದೆ ಸಹಾಯಕ ಸಿಬ್ಬಂದಿ, ಕ್ರೀಡಾಂಗಣದ ಸಿಬ್ಬಂದಿಗಳಿಗೂ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ.

ಆದರೆ, ಪರಿಸ್ಥಿತಿ ತಿಳಿಗೊಂಡರೆ ಮುಂಬೈಗೆ ಉಳಿದ ಪಂದ್ಯಾವಳಿಗಳನ್ನು ಶಿಫ್ಟ್ ಮಾಡಲು ಬಿಸಿಸಿಐ ಸಜ್ಜಾಗಿದೆ. ಜೊತೆಗೆ ಯುಎಇಯಲ್ಲಿ ಮತ್ತೊಮ್ಮೆ ಐಪಿಎಲ್ ನಡೆಸುವ ಸಾಧ್ಯತೆ ಬಗ್ಗೆ ಕೂಡಾ ಚರ್ಚಿಸಲಾಗುತ್ತಿದೆ.

ಆದರೆ, ಕೋವಿಡ್ ಭೀತಿಯಿಂದ ಕೆಲ ಫ್ರಾಂಚೈಸಿಗಳು ಮೈದಾನಕ್ಕಿಳಿಯಲು ಹಿಂದೇಟು ಹಾಕಿರುವ ಕಾರಣ ಬಿಸಿಸಿಐ ಗೊಂದಲದಲ್ಲಿದೆ…

ಒಟ್ಟಾರೆ ಈ ಬಾರಿಯ ಐಪಿಎಲ್ ನಲ್ಲಿ ಕರ್ನಾಟಕದ ಫೇವರೇಟ್ ಟೀಮ್ ಉತ್ತಮ ಲಯ ತಂದುಕೊಂಡಿತ್ತು ಈ ಬಾರಿಯಾದರೂ ಕಪ್ ನಮ್ಮದಾಗುವ ಸಾಧ್ಯ ಇದೆ ಎಂಬ ನಂಬಿಕೆಯಲ್ಲಿದ್ದರೂ ಆದರೆ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿರುವುದಂತು ಸತ್ಯ..

Leave a Reply

Your email address will not be published. Required fields are marked *

You cannot copy content of this page