ಭಾರತ ದೇಶವು ಅತಿ ದೊಡ್ಡ ಅಥವಾ ಎರಡನೆಯ ದೊಡ್ಡ ಆರ್ಥಿಕ ವ್ಯವಸ್ಥೆಯಾಗಲು ಬಯಸಿದರೆ, ತನ್ನ ಮಹಿಳಾ ಕಾರ್ಯಪಡೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಪ್ರೋ ಲಿಮಿಟೆಡ್ ನ ಗ್ಲೋಬಲ್ ಟ್ಯಾಕ್ಸ್ ಮುಖ್ಯಸ್ಥರಾದ ಶ್ರೀರಾಮ್ ರಂಗನಾಥನ್ ತಿಳಿಸಿದರು
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿ ಸಿ ಐ ಸಿ) ಸಹಯೋಗದೊಂದಿಗೆ ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯವರು ಆಯೋಜಿಸಿದ್ದ ಕಾರ್ಪೊರೇಟ್ ಹಣಕಾಸು ಮತ್ತು ಹಣಕಾಸು ಮಾರ್ಕೆಟ್ ಗಳಲ್ಲಿನ ಉದಯೋನ್ಮುಖ ಪ್ರವೃತ್ತಿಗಳು- ಈ ವಿಷಯ ಕುರಿತ ಹನ್ನೆರಡನೆಯ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ಅವರು, ಮಹಾನಗರಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಈ ಏರಿಕೆಯು ಕಡಿಮೆಯೇ ಇದೆ. ಭಾರತದ ಆರ್ಥಿಕಮಟ್ಟ ಉತ್ತಮವಾಗಲು ಈ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. “ನಮ್ಮ ದೇಶದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಮಹಿಳಾ ಕಾರ್ಯಪಡೆಯ ಈಗಿನ ಸಂಖ್ಯೆ ಕಡಿಮೆ. ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗುವತ್ತ ಮುಂದುವರೆಯಬಹುದು” ಎಂದು ಹೇಳಿದರು.
ತಮ್ಮ ಭಾಷಣವನ್ನು ಮುಂದುವರೆಸಿದ ಅವರು, ಭಾರತದ ಬಂಡವಾಳ ಮಾರುಕಟ್ಟೆಗಳ ವಿಕಾಸ, ವಿದೇಶಿ ಬಂಡವಾಳ ಹೂಡಿಕೆಗಳ (FPIs) ಚಂಚಲತೆಯ ವಿರುದ್ಧ ಸ್ಥಿರತೆಯನ್ನು ಒದಗಿಸುವಲ್ಲಿ ದೇಶೀಯ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಶ್ರೀ ರಂಗನಾಥನ್ ಅವರು ಜಾಗತಿಕ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಭಾರತೀಯ ಮಾರುಕಟ್ಟೆಯ ಚೇತರಿಕೆಯು ಭವಿಷ್ಯದ ಬೆಳವಣಿಗೆಯ ಧನಾತ್ಮಕ ಲಕ್ಷಣವಾಗಿದೆ ಎಂದರು. ಆರ್ಥಿಕತೆಯ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಆಧುನಿಕ ಬುದ್ಧಿಮತ್ತೆಯ ಪಾತ್ರದ ಬಗ್ಗೆ ಒಳನೋಟ ಪ್ರಸ್ತುತಿಯೊಂದಿಗೆ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಮುನ್ನ ಡಾ. ಎಂ. ಶ್ರೀರಾಮ್, ಅಸೋಸಿಯೇಟ್ ಪ್ರೊಫೆಸರ್ – ಆರ್ಥಿಕ ವಿಷಯ ಹಾಗೂ ಸಮ್ಮೇಳನದ ಮುಖ್ಯಸ್ಥರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಸಮ್ಮೇಳನದ ಮುಖ್ಯ ವಿಷಯವನ್ನು ಪರಿಚಯಿಸಿದರು. ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕ ಮಾರುಕಟ್ಟೆಯ ಅಭಿವೃದ್ಧಿಗೆ ಅನುಕೂಲಕರ ಅಂಶಗಳ ಬಗ್ಗೆ ಅವರು ಮಾತನಾಡಿದರು. ಡಾ. ಮೌಸುಮಿ ಸೇನ್ ಗುಪ್ತ, ಪ್ರಾಧ್ಯಾಪಕರು ಮತ್ತು ಡೀನ್ – ಅಂತರರಾಷ್ಟ್ರೀಯ ಸಂಬಂಧಗಳು, ಎಸ್ ಡಿ ಎಮ್ ಐ ಎಮ್ ಡಿ, ಇವರು ಮಾತನಾಡುತ್ತ ಹಣಕಾಸು ವಿನಿಮಯದ ಡಿಜಿಟಲೀಕರಣ, ಅದರ ಮಹತ್ವ ಹಾಗೂ ಆರ್ಥಿಕ ಒಳಗೊಳ್ಳುವಿಕೆಯ ಮೇಲೆ ಅದರ ಪ್ರಭಾವದ ಬಗ್ಗೆ ಹೇಳಿದರು.
ದೇಶದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸಿರುವ ತಜ್ಞರು, ಲೇಖಕರಿಂದ ಸಮ್ಮೇಳನದಲ್ಲಿ ಲೇಖನ ಪ್ರಸ್ತುತಿ ಇರಲಿದ್ದು, ಶುಕ್ರವಾರದಂದು ಸಮ್ಮೇಳನ ಸಮಾರೋಪ ಸಮಾರಂಭ ಇರಲಿದೆ. ಡಾ. ಎಸ್. ಕಣ್ಣದಾಸ್, ಅಸೋಸಿಯೇಟ್ ಪ್ರೊಫೆಸರ್- ಹಣಕಾಸು ವಿಷಯ, ಇವರು ವಂದನಾರ್ಪಣೆ ಮಾಡಿದರು.