ಸ್ಯಾಂಡಲ್ ವುಡ್ ನಲ್ಲಿ ನಟ ಭಯಂಕರ, ನಟ ಭೀಭತ್ಸ ಎಂದು ಒಬ್ಬ ನಟನ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂದರೆ ತಟ್ಟನೆ ಎಲ್ಲರಿಗೂ ವಜ್ರಕಂಠದ, ಮೈ ನವಿರೇಳಿವಂತಹ ನಟನೆಗೆ ಹೆಸರಾದ ಅಪ್ರತಿಮ ಕಲಾವಿದ ವಜ್ರಮುನಿ ಅವರೇ ಎಂದು ಊಹಿಸುವುದು ಬಹಳ ಸುಲಭ.
ಆ ಮಹಾನಟನ ಜೀವನವೊಂದು ದಂತ ಕಥೆ. ಕನ್ನಡ ಚಿತ್ರರಂಗ ಎಂದಿಗೂ ಎಂದೆಂದಿಗೂ ಮರೆಯಲಾರದ ನಟ, ವಿಶೇಷವಾಗಿ ಖಳನಟ ಎಂಬುದಕ್ಕೆ ಹೊಸ ಭಾಷ್ಯವನ್ನು ಬರೆದ ಅಪರೂಪದ ಕಲಾವಿದ ವಜ್ರಮುನಿ.
ತೆರೆಯ ಮೇಲೆ ಹೆಬ್ಬುಲಿಯಂತೆ ಅಬ್ಬರಿಸಿದ ಈ ನಟನ ಕೊನೆಯ ದಿನಗಳು ಮಾತ್ರ ಅಸಹನೀಯ ಎಂಬುದು ಎಷ್ಟೋ ಜನಕ್ಕೆ ತಿಳಿದಿಲ್ಲ.
ವಜ್ರಮುನಿ ಅವ್ರು ಕನ್ನಡ ಸಿನಿಮಾ ರಂಗದ ಹಿರಿಯ ನಟರಾಗಿದ್ದರು. ಕನ್ನಡ ಸಿನಿಮಾಗಳಲ್ಲಿ ಇವರು ವಹಿಸಿದ ಖಳನಾಯಕನ ಪಾತ್ರ ಹೆಚ್ಚು ಪ್ರಸಿದ್ಧಿ ಪಡೆಯಿತು, ಜನಮನದಲ್ಲಿ ಅಚ್ಚಳಿಯದೆ ಉಳಿಯಿತು.
ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ,
ವಿದ್ಯಾಭ್ಯಾಸದ ಕಡೆಗೆ ಗಮನಹರಿಸದೇ ನಾಟಕರಂಗದೆಡೆ ಒಲವು ತೋರಿಸಿ ಕಾಲೇಜು ವಿದ್ಯಾಭ್ಯಾಸವನ್ನು ತೊರೆದು ನಾಟಕಕ್ಕೆ ಇಳಿದರು.
ಕಣಗಾಲ ಪ್ರಭಾಕರ ಶಾಸ್ತ್ರೀಗಳ “ಪ್ರಚಂಡ ರಾವಣ” ನಾಟಕದಲ್ಲಿ ಇವರು ಅಭಿನಯಿಸಿದ ರಾವಣನ ಪಾತ್ರ ಅವರಿಗೆ ವಿಶೇಷ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
1967 ನಲ್ಲಿ ಪುಟ್ಟಣ್ಣನವರ “ಸಾವಿರ ಮೆಟ್ಟಿಲು” ಸಿನಿಮಾ ಮುಖೇನ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದರಾದರೂ ಆ ಚಿತ್ರ ರಿಲೀಸ್ ಆಗಿಲ್ಲ ಎಂಬ ಕೊರಗಲಿದ್ದರು ನಂತರ ಪುಟ್ಟಣ್ಣನವರೇ ನಿರ್ದೇಶಿಸಿದ “ಮಲ್ಲಮ್ಮನ ಪವಾಡ” ಸಿನಿಮಾದಲ್ಲಿ ನಟಿಸಿ ಬಿಡುಗಡೆಯೂ ಕಂಡು, ತಮ್ಮ ಮೊದಲನೆಯ ಚಿತ್ರದಲ್ಲಿ ಚಿತ್ರರಸಿಕರ , ಪ್ರೇಕ್ಷಕರ , ವಿಮರ್ಶಕರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದರು ವಜ್ರಮುನಿ.
ನಂತರ ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು .
ಒಂದೊಂದೆ ಯಶಸ್ಸಿನ ಮೆಟ್ಟಿಲನ್ನೇರಲು ಮುಂದಾದ ವಜ್ರಮುನಿ ಗೆಜ್ಜೆಪೂಜೆ , ನಾಗರಹಾವು , ಉಪಾಸನೆ, ಮಯೂರ , ಬಹದ್ದೂರ್ ಗಂಡು, ಭರ್ಜರಿ ಭೇಟೆ, ಪ್ರೇಮದ ಕಾಣಿಕೆ ಶಂಕರ್ ಗುರು, ಬಂಗಾರದ ಮನುಷ್ಯ, ಗಿರಿಕನ್ಯೆ, ಆಕಸ್ಮಿಕ, ಭಕ್ತ ಕುಂಬಾರ ಮೊದಲಾದ ಚಿತ್ರಗಳು ವಜ್ರಮುನಿಯವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಸಿನಿಮಾ, ಅದಷ್ಟೇ ಅಲ್ಲ ಬೆತ್ತಲೆ ಸೇವೆ ಸಿನಿಮಾ ದಲ್ಲಿ ಅದ್ಬುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಗಳಿಸಿದರು.
ವಜ್ರಮುನಿ ಅವರು ಕೊನೆಗಾಲದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.
ಅವರ ಎರಡೂ ಕಿಡ್ನಿಗಳು ಕೂಡ ಫೇಲ್ ಆಗಿದ್ದವು. ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅವರ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಕೂತರೆ ನಿಲ್ಲುವುದು ಕಷ್ಟ, ನಿಂತರೆ ಕೂರುವುದೇ ಯಮಯಾತನೆ ಯಾಗಿತ್ತು.
ವಜ್ರಮುನಿ ಅವರು ತಮ್ಮ ಈ ದುಸ್ಥಿತಿಯ ಬಗ್ಗೆ ಅವರು ಅನೇಕರ ಬಳಿ ಹೇಳಿಕೊಂಡಿದ್ದರು.
ತಾವು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ಅವರಿಗೆ ತಿಳಿದಿತ್ತು.
ಕಿಡ್ನಿ ಡಯಾಲಿಸಿಸ್ ಮಾಡಿಸಿಕೊಂಡ ದಿನಗಳಂತೂ ಇನ್ನೂ ಭೀಕರವಾಗಿ ಇದ್ದವು.
ಬಹಳಷ್ಟು ಕ್ರಿಯಾಶೀಲರಾಗಿದ್ದ ವಜ್ರಮುನಿ ಅವರ ದೇಹ ತೀವ್ರ ಅನಾರೋಗ್ಯದಿಂದ ಜರ್ಜರಿತವಾಗಿತ್ತು.
ವಜ್ರದಂತಹ ಕಂಠದಲ್ಲಿ ಮೊದಲಿನ ಚೈತನ್ಯ ಇರಲಿಲ್ಲ.
ಹಾಸಿಗೆಯಲ್ಲಿ ದಿನಗಳನ್ನು ದೂಡುವುದು ಅವರಿಗೆ ಬಹಳ ಸಂಕಟವನ್ನು ಉಂಟು ಮಾಡಿತ್ತು.
ತೆರೆಯ ಮೇಲೆ ಬಂದರೆ ಜನರ ಎದೆಯಲ್ಲೊಂದು ತಲ್ಲಣ ಸೃಷ್ಟಿಸುತ್ತಿದ್ದ ನಟನ ಮೇಲೆ ವಿಧಿಯು ತನ್ನ ಕ್ರೂರ ದೃಷ್ಟಿಯನ್ನು ಬೀರಿತ್ತು.
ಬಹುಶಃ ಈ ನಟ ಭಯಂಕರನ ಜೀವನದಲ್ಲಿ ಇಂತಹುದೊಂದು ದಿನ ಬರಬಹುದೆಂದು ಯಾರೂ ಊಹಿಸಿರಲಿಲ್ಲ.
ಹೀಗೆ ಅನಾರೋಗ್ಯದಿಂದಲೇ ವಜ್ರಮುನಿಯವರು ಜನವರಿ 5 2006 ರಂದು ಈ ಲೋಕವನ್ನು ತ್ಯಜಿಸಿ ಬಹು ದೂರ ಹೊರಟು ಹೋದರು.
ವಜ್ರಮುನಿ ಅವರು ದೈಹಿಕವಾಗಿ ನಮ್ಮೊಟ್ಟಿಗೆ ಇಲ್ಲವಾದರೂ, ಅವರ ಒಂದೊಂದು ಪಾತ್ರವೂ ಕೂಡಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ವಜ್ರಮುನಿ ಅವರನ್ನು ಸ್ಯಾಂಡಲ್ ವುಡ್ ಮರೆಯುವುದು ಅಸಾಧ್ಯ. ಕನ್ನಡ ಚಿತ್ರರಂಗದಲ್ಲಿ ವಜ್ರಮುನಿ ಅವರಂತಹ ಇನ್ನೊಬ್ಬ ನಟ ಖಳನ ಪಾತ್ರದಲ್ಲಿ ಅಬ್ಬರಿಸಿದ್ದು ಇಲ್ಲ. ಅವರ ಸ್ಥಾನ ಎಂದಿಗೂ ಚಿತ್ರರಂಗದಲ್ಲೊಂದು ಮೇರು ಪರ್ವತ ಇದ್ದಂತೆ ಎಂಬುದು ಸುಳ್ಳಲ್ಲ.. ವಜ್ರಮುನಿ ಎಂದೆಂದಿಗೂ ಅಮರ..