ಆರೋಗ್ಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಕೆ.ಎಂ.ಗಾಯಿತ್ರಿ ಸೂಚನೆ

ಎಲ್ಲಾ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಿ, ಜನತೆಯ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಸೂಚನೆ ನೀಡಿದರು.

ಸಾಲಿಗ್ರಾಮ ತಾಲ್ಲೂಕಿನ ಶೀಗೆವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ವಾಂತಿ-ಬೇದಿಯಿಂದಾಗಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು ತಂಡ ರಚಿಸಿ ಗ್ರಾಮದ ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಬೇಕು. ಮಕ್ಕಳಿಂದ ವಯಸ್ಸಾದ ವೃದ್ಧರವರೆಗೂ ಆರೋಗ್ಯ ವಿಚಾರಣೆ ನಡೆಸಿ. ಮನೆಯ ಶುಚಿತ್ವ, ಶುದ್ದ ಕುಡಿಯುವ ನೀರು ಹಾಗೂ ಓ.ಆರ್.ಎಸ್. ಪುಡಿಯನ್ನು ಸೇವಿಸುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ವಾಂತಿ ಭೇದಿ ಕಂಡು ಬಂದ ಮಂದಿ ಆರೋಗ್ಯವಾಗಿದ್ದಾರೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ ಓರ್ವ ಮೃತಪಟ್ಟಿದ್ದಾರೆ. ಸದರಿ ಪ್ರಕರಣದಲ್ಲಿ ಆರೋಗ್ಯಾಧಿಕಾರಿ ಅವರ ವರದಿ ಪ್ರಕಾರ ಅವರು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚರಂಡಿ, ನೀರಿನ ಟ್ಯಾಂಕ್ ಮತ್ತು ಸ್ಥಾವರಗಳನ್ನು ಕೂಡಲೇ ಸ್ವಚ್ಛಗೊಳಿಸಿ. ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಹಾಗೂ ಆರೋಗ್ಯ ಕೇಂದ್ರದ ಬಗ್ಗೆ ನೀಗಾವಹಿಸುವಂತೆ ಪಿಡಿಒ ಅವರಿಗೆ ಸೂಚಿಸಿದರು.

ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುವ ಕೊಟ್ಟಿಗೆ, ಕೆರೆ, ನೀರುಗಾಲುವೆ, ಮನೆ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡು ಗ್ರಾಮದ ಅಭಿವೃದ್ದಿಗೆ ಸಹಕರಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು.
ಬಳಿಕ ಅಂಗನವಾಡಿಗೆ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿಯ ಮೂಲಭೂತ ಸೌಕರ್ಯದ ಬಗ್ಗೆ ಮಾಹಿತಿ ಪಡೆದು, ಅಡುಗೆ ಮನೆಗೆ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದರು . ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಮಕ್ಕಳಿಗೆ ಅತ್ಯಂತ ಗುಣಮಟ್ಟದ ಪೌಷ್ಠಿಕಾಂಶ ಹೊಂದಿರುವ ಆಹಾರ ನೀಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ತಹಶೀಲ್ದಾರ್ ನರಗುಂದ, ಕಾರ್ಯನಿರ್ವಾಹಕ ಅಧಿಕಾರಿಗಳು ಕುಲ್ ದೀಪ್, ಪಿಡಿಓ ಶ್ರೀಧರ್, ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page