Lohith hanumanthappa :
ಅವನ ಆಟವನ್ನು ಬಲ್ಲವರು ಯಾರು ಇಲ್ಲವೆ ಇಲ್ಲ..
ಮನುಷ್ಯ ಹುಟ್ಟಿದ ದಿನವೇ ಇಂತ ದಿನವೇ ಆತನ ಅಂತ್ಯದ ದಿನವೆಂದು ಗೊತ್ತಾಗಿದ್ದರೆ ಚೆನ್ನಾಗಿರುತ್ತಿತ್ತು..
ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬಹುದಾಗಿತ್ತು…
ಅದರಲ್ಲೂ ಈ ರೀತಿ ಒಳ್ಳೆಯತನವನ್ನು ತುಂಬಿದ ವ್ಯಕ್ತಿಗಳನ್ನು ಭೂಮಿಗೆ ಕಳುಹಿಸಿ ಇದ್ದಕಿದ್ದ ಹಾಗೆ ಕರೆದುಕೊಂಡರೆ ಅವರನ್ನು ನಂಬಿದ ಜನರ ಪಾಡೇನು …??!!
ಕೆಲವೊಮ್ಮೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಇಲ್ಲವಾದಾಗಲೂ ತಡೆಯಲಾಗದ ನೋವಾಗುವುದು ಮನಸ್ಸು ಕುಗ್ಗಿ ಹೋಗುವುದು ಎಂಬುದಕ್ಕೆ ಅಪ್ಪು ಅಗಲಿಕೆಯೇ ಉದಾಹರಣೆ..
ನಾನು ಇಲ್ಲಿ ಒಬ್ಬ ಮಾಧ್ಯಮ ವರದಿಗಾರನಾಗಿ ಅವರ ಬಗ್ಗೆ ಪುನಿತ್ ಇನ್ನಿಲ್ಲ ನೆನಪು ಮಾತ್ರ ಎಂದು ಬರೆಯುವಾಗ ಕಣ್ಣಂಚಲಿ ನೀರು ಬಂದಿದ್ದು ಸತ್ಯ , ಕೆಲ ಕಾಲ ಮೌನವಾಗಿದ್ದು ಸತ್ಯ..
ಅದರಲ್ಲೂ ನನ್ನ ಹೆಸರು ಲೋಹಿತ್, ನಾನೂ ಚಿಕ್ಕವನಾಗಿದ್ದಾಗಿನಿಂದಲೂ ಪುನಿತ್ ರಾಜ್‌ಕುಮಾರ್ ಅವರ ಮೊದಲ ಹೆಸರು ಲೋಹಿತ್ ಎಂದು ಹಲವರು ಹಲವಾರು ಬಾರಿ ಅದನ್ನ ಹೇಳುತ್ತಿದ್ದದ್ದು ನನ್ನ ಕಿವಿಗೆ ಬಿದ್ದಿದೆ ..
ಆ ಮಾತು ಕೇಳಿದಾಗ ನನ್ನಲ್ಲೇ ಏನೋ ಒಂದು ಆನಂದ ಓ ಪುನಿತ್ ಅವರ ಮೊದಲ ಹೆಸರು ನನ್ನ ಹೆಸರು ಒಂದೆ ಎನ್ನುವ ಹೆಮ್ಮೆ ..
ಆವಾಗಿನಿಂದ ಅವರೆಂದರೆ ನನಗೆ ಏನೋ ಒಂಥರಾ ಸೆಳೆತ ..
ಅವರಂತ ನೈಜ ನಟನೆಯ ಕಲಾವಿದ, ಅವರಂತ ರಿಯಲ್ ಸ್ಟಂಟ್ ಹೀರೋ, ಸೂಪರ್ ಡ್ಯಾನ್ಸರ್ , ಮಾನವೀಯ ಮೌಲ್ಯವುಳ್ಳ ವ್ಯಕ್ತಿ ಮತ್ಯಾರು ಸಿಗಲಾರರು..
ಇಂದು ಅವರು ಇಲ್ಲ , ಅವರ ಅಂತಿಮ ಸಂಸ್ಕಾರ ಇಂತಹ ಜಾಗದಲ್ಲಿ ನಡೆಯುತ್ತದೆ , ತಂದೆ ಯಂತೆಯೇ ತಮ್ಮ ನೇತ್ರದಾನ ಮಾಡಿದ್ದಾರೆ ಎನ್ನುವ ಸುದ್ದಿ ಬರೆಯುತ್ತೇನೆ ಎಂದರೆ ಅದಕ್ಕಿಂತ ನೋವಿನ ಸಂಗತಿ ಬೇರೆನೂ ಇಲ್ಲ ,
ಎಲ್ಲೋ ಒಂದು ಕಡೆ ನಮ್ಮೆಲ್ಲರ ಮನೆಯ ಸದಸ್ಯನನ್ನೆ ಕಳೆದುಕೊಂಡೆವಲ್ಲ ಎಂಬ ಭಾವನೆ …
ಇನ್ನೆಂದೂ ಪುನೀತ್ ಯಾವುದೇ ವೇದಿಕೆ ಮೇಲೆ ಮಾತನಾಡುವುದಿಲ್ಲ.. ಯಾವುದೇ ಸಿನಿಮಾ ಗಳಲ್ಲಿ ಅಭಿನಯಿಸುವುದಿಲ್ಲ.. ಆ ನಗು ಮುಖವ ನೋಡಲು ಸಾಧ್ಯವಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳುವುದೇ ಜೀರ್ಣಿಸಿಕೊಳ್ಳಲಾಗದ ವಿಚಾರ..
ಇಂದು ನಾಡಿಗೆ ನಾಡೇ ಕನ್ನಡ ನಾಡಿನ ಅಮೂಲ್ಯ ರತ್ನವನ್ನು ಕಳೆದುಕೊಂಡು ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ನೋವನ್ನು ಸಂಕಟವನ್ನು ಅನುಭವಿಸುತ್ತಿದೆ..
ಅಂತಹ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡು ನಾವುಗಳೇ ಇಷ್ಟು ಸಂಕಟ ಪಡುತ್ತಿರುವಾಗ ಪುನೀತ್ ಅವರ ಕುಟುಂಬ ಅದರಲ್ಲೂ ಅವರ ಮಡದಿ ಅಶ್ವಿನಿ ಅವರು ಹಾಗೂ ಆ ಎರಡು ಹೆಣ್ಣು ಮಕ್ಕಳು ಈ ಅಚಾನಕ್ ಘಟನೆಯಿಂದ ಅನುಭವಿಸುತ್ತಿರುವ ನೋವು ಯಾವ ಮಟ್ಟದ್ದು ಎಂದು ಊಹಿಸಲು ಸಹ ಅಸಾಧ್ಯ..
ಹೌದು ಬೆಳಗ್ಗೆ ಜೊತೆಗೇ ಇದ್ದ ಗಂಡ ಕೆಲವೇ ಘಂಟೆಗಳಲ್ಲಿ ಇಲ್ಲವೆಂದು ಆ ಮಡದಿಯ ಜೀವ ಹೇಗೆ ತಾನೆ ಅರಗಿಸಿಕೊಳ್ಳುವುದು..
ಜನರೇ ಇಷ್ಟೊಂದು ಮೆಚ್ಚಿಕೊಂಡ ಅಪ್ಪುವನ್ನು ಅವರ ಪತ್ನಿ ಇನ್ನೆಷ್ಟು ಪ್ರೀತಿಸುತ್ತಿದ್ದಿರಬಹುದು.. ಇಷ್ಟು ಸಣ್ಣ ವಯಸ್ಸಿಗೆ ಪ್ರೀತಿಸುವ ಜೀವವನ್ನು ಕಳೆದುಕೊಂಡ ಅವರ ಮನಸ್ಸು ಹೇಗಾಗಿರಬಹುದು..
ಶುಕ್ರವಾರ ಅಕ್ಷರಶಃ ಬ್ಲ್ಯಾಕ್ ಫ್ರೈಡೇ.. ಕನ್ನಡಿಗರ ಪಾಲಿಗೆ ಅತ್ಯಂತ ಕೆಟ್ಟ ಶುಕ್ರವಾರವಾಗಿದೆ.. ಕೋಟ್ಯಾಂತರ ಜನರ ಪ್ರಾರ್ಥನೆ ದೇವರಿಗೆ ಮುಟ್ಟುವ ಮುನ್ನವೇ ಬೆಟ್ಟದ ಹೂ ದೇವರ ಪಾದ ಸೇರಿದೆ..
ಕರುನಾಡ ಮಾಣಿಕ್ಯ ಸ್ವರ್ಗದಲಿ ತಂದೆ ತಾಯಿಯ ಮಡಿಲು ಸೇರಿಯಾಗಿದೆ..
ಒಬ್ಬ ಒಳ್ಳೆಯ ಮನಸ್ಸಿನ ವ್ಯಕ್ತಿ ಹೋದರೆ ಅವರಿಗಾಗಿ ಎಷ್ಟು ಜನರು ಪರಿತಪಿಸುವರು ಕೊರಗುವರು ನೋವಲ್ಲಿ ಬೇಯುವರು ಎಂದು ಪುನೀತ್ ಅವರು ಹೋದ ದಿನ ಕಂಠೀರವ ಸ್ಟೇಡಿಯಂ ನ ಸುತ್ತ ಮುತ್ತಲಿನ ರಸ್ತೆಯಲ್ಲಿ ಕಿಕ್ಕಿರಿದು ಇಡೀ ರಾತ್ರಿ ಸೇರಿದ್ದ ಜನಸಾಗರ ನೋಡಿದರೆ ತಿಳಿಯುತ್ತದೆ..
ಅಪ್ಪು ನಿಜಕ್ಕೂ ಸಂಪಾದನೆ ಮಾಡಿರುವುದು ಇದನ್ನೇ..
ಆರು ತಿಂಗಳಿಗೆ ಬಣ್ಣ ಹಚ್ಚಿ ತೆರೆ ಮೇಲೆ ಬಂದರು..
ಅತಿ ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದರು..
ಅತಿ ಚಿಕ್ಕ ವಯಸ್ಸಿಗೆ ಜನರ ಮನಗೆದ್ದು ಕನ್ನಡಿಗರ ಮನೆ ಮಗನಾದರು..
ಆದರೆ ಅಷ್ಟೇ ವೇಗದಲಿ ನಮ್ಮನ್ನೆಲ್ಲಾ ತೊರೆದು ಹೊರಟೇ ಬಿಟ್ಟರು..
ಇತ್ತ ದೊಡ್ಡ ಮಗಳು ಧೃತಿ ಅಮೇರಿಕಾದಿಂದ ಶನಿವಾರ ಸಂಜೆ ಬಂದು ಅಪ್ಪನ ಮುಖ ನೋಡಿದರು..
ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ಪುನೀತ್ ಅವರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದರೂ ಸಹ ರಾಮನಗರದಲ್ಲಿನ ಪುನೀತ್ ಅವರ ತೋಟದಲ್ಲಿಯೇ ಅಂತಿಮ ಸಂಸ್ಕಾರ ಮಾಡಲು ನಿರ್ಧಾರ ಮಾಡಲಾಗಿತ್ತು..
ಅತ್ತ ರಾಮನಗರದ ಎಸ್ ಪಿ ಹಾಗೂ ಜಿಲ್ಲಾಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಕೂಡ ಮಾಡಿ ಬಂದಿದ್ದರು..
ಆದರೆ ಪುನಿತ್ ಪದೇ ಪದೇ ಹೇಳುತ್ತಿದ್ದ ಆ ಒಂದು ಮಾತಿಗಾಗಿ ಅವರ ಆಸೆ ನೆರವೇರಿಸಲಾಗಿದೆ
ಹೌದು ಪುನೀತ್ ರಾಜ್ ಕುಮಾರ್ ಅವರು ವಾರಕ್ಕೆ ಒಮ್ಮೆಯಾದರೂ ಅಪ್ಪ ಅಮ್ಮನ ಸಮಾಧಿ ಬಳಿ ಹೋಗುತ್ತಿದ್ದರು..
ಅಲ್ಲಿ ಹೋದರೆ ಅವರಿಗೆ ಏನೋ ಒಂದು ರೀತಿ ಸಮಾಧಾನ.. ಈ ಬಗ್ಗೆ ಈ ಹಿಂದೆ ರಮೇಶ್ ಅವರು ಕಾರ್ಯಕ್ರಮ ಒಂದರಲ್ಲಿ ಪ್ರಶ್ನಿಸಿದ್ದರು.. ನಿಮ್ಮ ಕಾರ್ ಅನ್ನು ಸದಾ ಕಂಠೀರವ ಸ್ಟುಡಿಯೋ ಬಳಿ ನೋಡುತ್ತಿರುತ್ತೇನೆ ಎಂದಿದ್ದರು ರಮೇಶ್ ಅವರು.. ಆಗ ಪ್ರತಿಕ್ರಿಯೆ ನೀಡಿದ್ದ ಪುನೀತ್ ಅವರು “ಅದೇನೋ ಗೊತ್ತಿಲ್ಲ ಸರ್..
ನನಗೆ ಆ ಜಾಗಕ್ಕೆ ಹೋದರೆ ಅದೇನೋ ನೆಮ್ಮದಿ.. ನಾನು ಅಲ್ಲಿ ಹೋಗಿ ಏನೂ ಕೇಳಲ್ಲ.. ಏನೂ ಹೇಳಲ್ಲ.. ಆದರೆ ಅಲ್ಲಿಗೆ ಹೋದರೆ ನನ್ನ ಚಿಂತೆ ಏನೇ ಇದ್ದರೂ ನಿರಾಳ ಆಗಿ ಬಿಡುತ್ತದೆ.. ಅದಕ್ಕೆ ಆಗಾಗ ನಾನು ಅಲ್ಲಿಗೆ ಹೋಗಿ ಅಪ್ಪ ಅಮ್ಮನ ಬಳಿ ಸುಮ್ಮನೆ ಕೂತು ಬಿಡುತ್ತೇನೆ.. ನನಗೆ ಅಲ್ಲೊಂದು ರೀತಿ ನೆಮ್ಮದಿ ಅನಿಸುತ್ತದೆ ಎಂದಿದ್ದರು.. ಇತ್ತ ಪತ್ನಿಯ ಜೊತೆಯೂ ಆಗಾಗ ಇದೇ ಮಾತನ್ನು ಹೇಳುತ್ತಿದ್ದರು ಪುನೀತ್.. ಅದೇ ಕಾರಣಕ್ಕೆ ಪುನೀತ್ ಅವರಿಗೆ ಬಹಳ ಇಷ್ಟವಾದ ಅದೇ ಜಾಗ ತನ್ನ ಅಪ್ಪ ಅಮ್ಮನ ಪಕ್ಕದಲ್ಲಿಯೇ ಅವರನ್ನೂ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇಂದು ಪುನೀತ್ ರಾಜ್‌ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆದಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ವಿಧಿವಿಧಾನದಂತೆ
ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಅಮ್ಮನ ಪಕ್ಕದಲ್ಲೇ ಕರುನಾಡಿನ ‘ಯುವರತ್ನ‘ ಚಿರನಿದ್ರೆಗೆ ಜಾರಿದ್ದಾರೆ,
ಪುನಿತ್ ಸರ್ ನೀವು ಕರುನಾಡು ಎಂದು ಮರೆಯದಷ್ಟು ಸಾಧನೆ ಮಾಡಿದ್ದಿರಾ ..
ನಿಮ್ಮನ್ನೂ ಮರೆಯಲು ಯಾರಿಂದಲೂ ಸಾಧ್ಯವಿಲ್ಲ ….
ಹೋಗಿ ಬನ್ನಿ…
ವಿ ಮಿಸ್ ಯೂ ಪುನಿತ್ ಸರ್
ಲೋಹಿತ್ ಹನುಮಂತಪ್ಪ ಮೈಸೂರು