ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ಸೇವಾ ಮನೋಭಾವದಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಬೇಕಾದ ಆಕ್ಸಿಜನ್, ರೆಮ್‌ಡಿಸಿವಿರ್ ಔಷಧ, ಮುಂತಾದ ಏನೇ ಸೌಲಭ್ಯ ಬೇಕಿದ್ದರೂ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಸಾಕಷ್ಟು ಇದೆ.
ಒಂದೆರೆಡು ದಿನದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಸರಬರಾಜು ಆಗಲಿದೆ. ಆತಂಕ ಪಡುವ ಅಗತ್ಯ ಇಲ್ಲ ಎಂದರು. ಮೈಸೂರಿನ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘವು ಜಿಲ್ಲಾಡಳಿತ ಜೊತೆ ಸದಾ ಕೈಜೋಡಿಸಿದೆ. ಇಡಿ ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸಂಘದ ಸಹಯೋಗದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಹಾಕಿದ್ದೇವೆ. ಲಸಿಕೆ ಹಾಕುವಲ್ಲಿ ಮೈಸೂರು ನಂಬರ್ 1 ಸ್ಥಾನಕ್ಕೆ ಬರಲು ನಮ್ಮ ಸಹಕಾರವೂ ಇದೆ ಎಂದು ಮಹಾನ್ ಸಂಘದ ಪದಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್, ರಘು ಕೌಟಿಲ್ಯ, ಆಶಾಕಿರಣ ಆಸ್ಪತ್ರೆಯ ಡಾ. ಗುರುರಾಜ್, ಕಾವೇರಿ ಆಸ್ಪತ್ರೆಯ ಡಾ. ಚಂದ್ರಶೇಖರ್, ಪ್ರೇರಣಾ ಆಸ್ಪತ್ರೆಯ ಡಾ. ಅಭಿಜಿತ್, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ. ಸಂತೃಪ್ತ್ , ಬೃಂದಾವನ ಆಸ್ಪತ್ರೆಯ ಡಾ. ರವೀಂದ್ರನಾಥ್, ಡಾ. ಖಂಡೇಶ್, ಮತ್ತಿತರರು ಉಪಸ್ಥಿತರಿದ್ದರು