ಸಿನಿಮಾ: ಖ್ಯಾತ ತೆಲುಗು ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್’ಗೆ ಕೊರೊನಾ ಪಾಸಿಟೀವ್ ಬಂದಿದ್ದು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಅಪೊಲೊ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಆಪ್ತ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಅವರ ಶ್ವಾಸಕೋಶದಲ್ಲಿ ಕಫ ತುಂಬಿದ್ದು, ಜ್ವರವೂ ಇದೆ. ಆದರೆ, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಅವರ ರಾಜಕೀಯ ಕಾರ್ಯದರ್ಶಿ ಪಿ.ಹರಿಪ್ರಸಾದ್ ಶುಕ್ರವಾರ ತಿಳಿಸಿದರು.
ಏಪ್ರಿಲ್ 3ರಂದು ಉಪಚುನಾವಣೆ ಪ್ರಚಾರ ಮುಗಿಸಿಕೊಂಡು ಬಂದ ಪವನ್ ಕಲ್ಯಾಣ್, ಹೈದರಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ. ‘ಮೊದಲಿಗೆ ಕೋವಿಡ್ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ನೆಗೆಟಿವ್ ಬಂದಿತ್ತು. ನಂತರದಲ್ಲೂ ಅವರಿಗೆ ಜ್ವರ ಹಾಗೂ ಮೈಕೈನೋವು ಮುಂದುವರಿದಿತ್ತು. ಎರಡನೇ ಬಾರಿ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ಕೋವಿಡ್ ದೃಢಪಟ್ಟಿದೆ’ ಎಂದು ಹರಿಪ್ರಸಾದ್ ಹೇಳಿದರು.