
ಹತ್ತು ವರ್ಷ ಹಳೆಯದಾದ ವಿವಾದಾತ್ಮಕ ಜಾತಿ ಸಮೀಕ್ಷೆ ವರದಿಯನ್ನು ತಿರಸ್ಕರಿಸುವಂತೆ ಬಿಜೆಪಿ ನಾಯಕ ಡಾ.ಶುಶ್ರುತಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಸದಾಗಿ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡುವಂತೆ ಆಗ್ರಹಿಸಿದ್ದಾರೆ.
“ಸುಮಾರು 10 ವರ್ಷಗಳ ಹಿಂದೆ ನಡೆಸಲಾದ ಈ ಜಾತಿ ಸಮೀಕ್ಷೆಯು ಈಗ ಅಪ್ರಸ್ತುತವಾಗಿದೆ. ಇದು ಎಲ್ಲಾ ಜಾತಿಗಳಲ್ಲಿ ಗೊಂದಲ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಇದು ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸುತ್ತದೆ, ಇದು ಸಮಾಜಕ್ಕೆ ಒಳ್ಳೆಯದಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

“ಈ ಸಮೀಕ್ಷೆಯಲ್ಲಿ ಬಹಳಷ್ಟು ಮನೆಗಳಿಗೆ ಸಮೀಕ್ಷೆದಾರರು ಭೇಟಿ ನೀಡಿಲ್ಲ. ಇದು ಎಲ್ಲರಿಗೂ ತಿಳಿದಿರುವ ಬಹಿರಂಗ ರಹಸ್ಯ. ಈ ಸಮೀಕ್ಷೆಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ ಎಂಬ ಭಯವಿದೆ. ಪ್ರತಿಯೊಬ್ಬರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ಗಣತಿಯು ಈಗಿನ ಅಗತ್ಯವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
“ಪ್ರಸ್ತುತ, ರಾಜ್ಯ ಸರ್ಕಾರವು ಈ ಸಮೀಕ್ಷೆಯ ವರದಿಯ ಜಾರಿ ಸಂಬಂಧ ವಿಳಂಬ ತಂತ್ರವನ್ನು ಅನುಸರಿಸುತ್ತಿದೆ. ಈ ತಂತ್ರದ ಬದಲಾಗಿ, ಸರ್ಕಾರವು ಹೊಸ ವೈಜ್ಞಾನಿಕ ಗಣತಿಗೆ ಆದೇಶಿಸಬಹುದು. ಅದು ಸರಿಯಾದ ದತ್ತಾಂಶ ಪಡೆದುಕೊಳ್ಳಲು ನೆರವಾಗುತ್ತದೆ. ಜೊತೆಗೆ ಹಿಂದುಳಿದ ಸಮುದಾಯಗಳ ಕಲ್ಯಾಣ ಯೋಜನೆಗಳನ್ನು ವಿನ್ಯಾಸಗೊಳಿಸಲು ನಿಜವಾದ ದತ್ತಾಂಶವು ತುಂಬಾ ಅಗತ್ಯವಿದೆ. ದೋಷಪೂರಿತ ವರದಿಯು ರಾಜ್ಯದ ಪ್ರಗತಿಗೆ ಮುಳ್ಳಾಗಬಹುದು ಎಂದು” ಎಂದು ಡಾ.ಗೌಡ ವಿವರಿಸಿದರು.
ಪರಸ್ಪರ ನಂಬಿಕೆ, ಪ್ರೀತಿ ಮತ್ತು ಸಹೋದರತ್ವದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು