ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ…
ಇಂದು ಬೆಳಗ್ಗೆ ವೈದ್ಯರು ಅಧಿಕೃತ ಘೋಷಣೆ ಮಾಡಿದ್ದಾರೆ,
ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿತ್ತು, ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು,
48 ಗಂಟೆಗಳು ಕಳೆದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ, ಪರಿಣಾಮವಾಗಿ ಸಂಚಾರಿ ವಿಜಯ್ ಮೃತರಾಗಿದ್ದಾರೆ,
ಈ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ…
”ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು.
ಭಾನುವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದ್ದರು, ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್ ಕಡೆಯಿಂದ ಪ್ರತಿಕ್ರಿಯೆ ಇರಲಿಲ್ಲ. ಮೆದುಳಿನ ಕೆಲಸಗಳು ನಿಂತು ಹೋಯಿತು. ಇದನ್ನು ಬ್ರೇನ್ ಡೆಡ್ ಎನ್ನುತ್ತೇವೆ”ಎಂದು ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದರು, ವೈದ್ಯರ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
ಸಂಚಾರಿ ವಿಜಯ್ ಬ್ರೇನ್ ಡೆಡ್ ಆದ ಬಳಿಕ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ಸಮ್ಮತಿ ನೀಡಿದರು ,ವೈದ್ಯರು ಅಂಗಾಂಗ ದಾನದ ಪ್ರೋಟೋಕಾಲ್ ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಲ್ತ್ ಬುಲೆಟಿನ್ ಮೂಲಕ ತಿಳಿದುಬಂದಿದೆ.
ಜೂನ್ 12ರಂದು ರಾತ್ರಿ ಅವರಿಗೆ ಅಪಘಾತವಾಗಿತ್ತು, ಸ್ನೇಹಿತನ ಬೈಕ್ನಲ್ಲಿ ಹಿಂಬದಿ ಕುಳಿತು ವಿಜಯ್ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಅಪಘಾತದ ತೀವ್ರತೆಗೆ ಅವರ ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು…
ತಮ್ಮ ಮನೋಜ್ಞ ಅಭಿನಯದ ಮೂಲಕ ಚಂದವನದಲ್ಲಿ ಗಮನ ಸೆಳೆದ ಸಂಚಾರಿ ವಿಜಯ್ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆ ನಟರಾಗಿದ್ದರು. ಹಾಗಾಗಿ ಸಾಲು ಸಾಲು ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದವು…
ಸಂಚಾರಿ ವಿಜಯ್ ನಟಿಸುತ್ತಿದ್ದ ಸಿನಿಮಾಗಳ ಸಂಖ್ಯೆ ಕೇಳಿದರೆ ನಿಮಗೆ ಅಚ್ಚರಿ ತರಿಸಬಹುದು. ಅಷ್ಟು ಸಿನಿಮಾಗಳು ಅವರ ಅಕೌಂಟ್ನಲ್ಲಿ ಜಮೆ ಆಗಿದ್ದವು.
ಬೆಳ್ಳಿತೆರೆ ಮೇಲೆ ನಕ್ಷತ್ರಗಳಂತೆ ಮಿಂಚುವ ಸ್ಟಾರ್ಗಳು ನಿಜ ಜೀವನದಲ್ಲೂ ರಿಯಲ್ ನಟರಾಗಿರಬೇಕು ಅನ್ನೋದು ಅಭಿಮಾನಿಗಳ ಅಭಿಲಾಷೆ.
ಈ ಮಾತಿಗೆ ನಟ ಸಂಚಾರಿ ವಿಜಯ್ ಹೊರತಾಗಿರಲಿಲ್ಲ. ಕೊರೊನಾ ಸಮಯದಲ್ಲಿ ಸಾವಿರಾರು ಜನರ ಹಸಿವು ನೀಗಿಸುವ ಸಲುವಾಗಿ ತಮ್ಮ ಸ್ವಂತ ಕಾರು ಮಾರುವ ಮೂಲಕ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದ ಹೀರೋ ಆಗಿ ಉಳಿದಿದ್ದಾರೆ. ಅಪಘಾತಕ್ಕೀಡಾಗಿ ಸಾವಿನೊಂದಿಗೆ ಹೋರಾಟ ನಡೆಸಿದ ಸಂಚಾರಿ ವಿಜಯ್ ಅವರ ಸಹಾಯ ನೆನೆದು ಹಲವರು ಭಾರವಾದ ಹೃದಯದಿಂದ ಕಣ್ಣೀರು ಸುರಿಸುತ್ತಿದ್ದಾರೆ.
ಸಂಚಾರಿ ವಿಜಯ್ ಹೀರೋ ಎನ್ನುವುದಕ್ಕಿಂತ ಒಬ್ಬ ಅದ್ಭುತ ನಟ. ಯಾಕಂದ್ರೆ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳು, ಆತನನ್ನು ಹುಡುಕಿ ಬರುತ್ತಿದ್ದ ಪಾತ್ರಗಳು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತಿದ್ದವು. ಈ ಸಾಲಿನಲ್ಲಿ ‘ತಲೆದಂಡ’ ಸಿನಿಮಾ ಮುಂಚೂಣಿಯಲ್ಲಿದೆ
ನಿರ್ದೇಶಕ ಪ್ರವೀಣ್ ಕೃಪಾಕರ್ ತಯಾರು ಮಾಡಿರುವ ‘ತಲೆದಂಡ’ ಚಿತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ.
ಈ ವರ್ಷ ನಡೆಯಬೇಕಿದ್ದ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ‘ತಲೆದಂಡ’ ಚಿತ್ರವನ್ನು ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡಿಲ್ಲ ಎಂದು ಸಂಚಾರಿ ವಿಜಯ್, ನಿರ್ದೇಶಕ ಪ್ರವೀಣ್ ಕೃಪಾಕರ್ ಇಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ತಲೆದಂಡ’ ಸಿನಿಮಾ ರಿಲೀಸ್ ಆಗಬೇಕಿದೆ,
ಸಂಚಾರಿ ವಿಜಯ್ ಅವರ ತೆರೆಕಾಣಬೇಕಾದ ಸಿನಿಮಾ’ಮೇಲೊಬ್ಬ ಮಾಯಾವಿ’ ವಿಭಿನ್ನ ಅವತಾರದಲ್ಲಿ ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ.
ಬಿಡುಗಡೆಗೆ ಸಜ್ಜಾಗಿರೋ ಈ ಚಿತ್ರಕ್ಕೆ ಸಂಚಾರಿ ವಿಜಯ್ ಡಬ್ಬಿಂಗ್ ಕೂಡ ಮುಗಿಸಿದ್ದು ವಿಶೇಷ. ಪತ್ರಕರ್ತರಾದ ಬಿ.ನವೀನ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವಿದೆ,
ಇನ್ನು ಕಳೆದ ವರ್ಷ ಸಂಚಾರಿ ವಿಜಯ್ ‘ಅವಸ್ಥಾಂತರ’ ಎಂಬ ಸಿನಿಮಾ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಜಿ ದೀಪಕ್ ಕುಮಾರ್ ನಿರ್ದೇಶನದಲ್ಲಿ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯಾಗಿದ್ದರು.
‘ಪುಕ್ಸಟ್ಟೆ ಲೈಫು’ ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ,
ಈ ಚಿತ್ರದಲ್ಲಿ ವಿಜಯ್ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು, ಅಚ್ಚುತ್ ಕುಮಾರ್, ರಂಗಾಯಣ ರಘು, ಮಾತಂಗಿ ಎನ್ ಪ್ರಸನ್ನ ಸಹ ನಟಿಸಿದ್ದರು,
ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.
ಇನ್ನು ಲೂಸ್ ಮಾದ ಯೋಗಿ ಜೊತೆ, ಮೊದಲ ಬಾರಿಗೆ ಸಂಚಾರಿ ವಿಜಯ್ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಚಿತ್ರ ‘ಲಂಕೆ’
ಈ ಸಿನಿಮಾವನ್ನ ಎಂ.ಡಿ ರಾಮು ಪ್ರಸಾದ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಟೈಟಲ್ ಲಾಂಚ್ ಅನ್ನ ಬಹಳ ಗ್ರ್ಯಾಂಡ್ ಆಗಿ ಮಾಡಲಾಗಿತ್ತು.
ಈ ಚಿತ್ರದಲ್ಲಿಯೂ ಕೂಡ ಸಂಚಾರಿ ವಿಜಯ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಜನಾರ್ಧನ್ ಪಿ ಜಾನಿ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ‘ಪಿರಂಗಿಪುರ’ ಸಿನಿಮಾ ಸಂಚಾರಿ ವಿಜಯ್ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾಗಿತ್ತು,
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಚಿತ್ರ ತಯಾರಾಗಲಿದ್ದು ಬಹು ಕೋಟಿ ಬಜೆಟ್ ಎಂದು ಸುದ್ದಿಯಾಗಿತ್ತು.
ಈ ಸಿನಿಮಾ ಕೂಡ ಇನ್ನು ತೆರೆಗೆ ಬಂದಿಲ್ಲ, ಕಳೆದ ನಾಲ್ಕು ವರ್ಷದಿಂದ ಈ ಪ್ರಾಜೆಕ್ಟ್ ಚರ್ಚೆಯಲ್ಲಿದೆ…
ಅಪಘಾತಕ್ಕೀಡಾಗಿ ಸಾವಿನೊಂದಿಗೆ ಹೋರಾಟ ನಡೆಸಿ , ಎಲ್ಲರನ್ನೂ ಅಗಲಿರುವ ಸಂಚಾರಿ ವಿಜಯ್ ಅವರ ಅಭಿನಯ ಹುಡುಕಿಕೊಂಡು ಬಂದ ಸಾಲು ಸಾಲು ಸಿನಿಮಾಗಳಿವು….
ಸಂಚಾರಿ ವಿಜಯ್ ಇಂದು ನಮ್ಮಜೊತೆಗೆ ಇಲ್ಲಾ ..
ಆದರೆ ಅವರು ಅಭಿನಯಿಸಿರುವ ಚಿತ್ರಗಳು ಎದೆಂದೂ ಜೀವಂತವಾಗಿರುತ್ತವೆ..
ಅವರು ಹೆಲ್ಮೆಟ್ ಧರಿಸಿದ್ದರೆ ಅ ಅಪಘಾತ ದಲ್ಲಿ ಬದುಕುವ ಛಾನ್ಸ್ ಇತ್ತು ಅನ್ಸುತ್ತೆ ..
ಆದರೂ ದುರಂತ ನಡೆದೋಗಿದೆ..
ನಾನು ಒಬ್ಬ ವರದಿಗಾರನಾಗಿ ವಿಜಯ್ ಅವರ ಬಗ್ಗೆ ಸುದ್ದಿ ಮಾಡಲು ಹಿಂದೆ ಮುಂದೆ ನೋಡಿದೆ ಯಾಕೆಂದರೆ , ಏನಾದರೂ ಅದ್ಬುತ ನಡೆದು ವಿಜಯ್ ಮತ್ತೆ ಬದುಕಿ ಬರಬಹುದೆಂಬ ಆಶಾಭಾವನೆ ನನ್ನದಾಗಿತ್ತು ಆದರೆ ವಿಧಿಆಟ ಬೇರೆಯದ್ದೆ ಇತ್ತು..
ವಿಜಯ್ ಒಬ್ಬ ಪ್ರತಿಭಾನ್ವಿತ ಕಲಾವಿದ , ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ,
ಆತ ಅಷ್ಟೇಲ್ಲ ಸಾಧನೆ ಮಾಡುವ ಮುನ್ನ ಹಲವಾರು ನೋವುಗಳು ಅವಮಾನಗಳನ್ನ ಅನುಭವಿಸಿದ್ದಾರೆ ,
ಅವಕಾಶಗಳಿಗೆ ಹಂಬಲಿಸಿದ್ದಾರೆ ,
ಚಿತ್ರರಂಗದಲ್ಲಿ ಗಾಡ್ ಫಾದರ್ ಗಳು ಇದ್ದರೂ ಏನೂ ಸಾಧನೆ ಮಾಡೋಕಾಗಲ್ಲ , ಅಂತದ್ರಲ್ಲಿ ಯಾವುದೇ ಗಾಡ್ ಫಾದರ್ ಗಳ್ಳಿಲ್ಲದೆ ಒಬ್ಬ ಕಲಾವಿದ ನ್ಯಾಷನಲ್ ಅವಾರ್ಡ್ ತಗೋತಾನೆ ಅಂದ್ರೆ ಅದು ಸಾಮಾನ್ಯ ವಿಚಾರ ಅಲ್ಲವೆ ಅಲ್ಲ ,
ದಯಮಾಡಿ ಕಲಾವಿದರು, ನಟರು , ಯಾವುದೇ ವಿಭಾಗದ ಯುವ ಪ್ರತಿಭಾನ್ವಿತರುಗಳು ಜೀವಂತ ಇದ್ದಾಗಲೆ ಪ್ರೋತ್ಸಾಹಿಸಿ , ಅವಕಾಶಕೊಡಿ ,
ಸತ್ತಾಗ ಪಾರ್ಥಿವ ಶರೀರದ ಮುಂದೆ ನಿಂತು ಅತ್ತರೆ ಏನೂ ಪ್ರಯೋಜನವಿಲ್ಲ ,
ಇದ್ದಗಲೇ ಅವರನ್ನು ಬೆನ್ನುತಟ್ಟಿ ಹುರಿದಂಬಿಸಿದರೆ ಇನ್ನಷ್ಟು ಸಾಧನೆಗಳನ್ನು ಮಾಡಲು ಸಜ್ಜಾಗುತ್ತಾರೆ ,
ಇದ್ದಾಗ , ಅವಕಾಶಗಳಿಗೆ ಹಂಬಲಿಸುವಾಗ , ಕಷ್ಟಗಳನ್ನು ಹೇಳಲು ಮುಂದೆ ಬಂದಾಗ, ಇವನಾರವ.. ಇವನಾರವ..
ಎಂದು ಹೇಳುತ್ತ..
ಸತ್ತಾಗ ಇವ ನಮ್ಮವ ಇವ ನಮ್ಮವ ಎಂದು ಹೇಳುವ ಜನರಿಗೆ ಹೇಳುವುದೊಂದೆ , ಜೀವ ಇದ್ದಾಗ ಅವರ ಕಷ್ಟಗಳಿಗೆ ಸ್ಪಂದಿಸಿ , ಬೆನ್ನುತಟ್ಟಿ , ಪ್ರೋತ್ಸಾಹಿಸಿ
ಒಳ್ಳೆಯ ಮಾತುಗಳನ್ನಾಡಿ ಅವರು ಇನ್ನಷ್ಟು ಸಾಧನೆಗಳನ್ನ ಮಾಡುತ್ತಾರೆ ….
ಉಸಿರು ತಂಡದ ಸದಸ್ಯನಾಗಿ ಅನೇಕರಿಗೆ ಉಸಿರು ನೀಡುವ ಕೆಲಸ ಮಾಡಿದ್ದ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ……
*ವರದಿ ಲೋಹಿತ್ ಹನುಮಂತಪ್ಪ ಮೈಸೂರು.*