ಸ್ವರ ಕುಟೀರದ ಉದ್ಘಾಟನೆಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ನೆರವೇರಿಸಲಿದ್ದಾರೆ, ಎಂದು ಧ್ವನಿ ಫೌಂಡೇಷನ್ ಸ್ಥಾಪಕಿ ಡಾ.ಶ್ವೇತಾ ಮಡಪ್ಪಾಡಿ ತಿಳಿಸಿದ್ದಾರೆ.
ದಟ್ಟಗಳ್ಳಿಯ ಸೋಮನಾಥನಗರದ ಎಂಟನೇ ಬ್ಲಾಕ್ ನಲ್ಲಿರುವ ‘ಸ್ವರ’ ನಿವಾಸದಲ್ಲಿ ಅಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟ, ನಿರ್ದೇಶಕ ಬಿ.ಸುರೇಶ್ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ಪ್ರಸಿದ್ದ ಹಿಂದುಸ್ತಾನಿ ಗಾಯಕರಾದ ಉಸ್ತಾದ್ ಫಯಾಜ್ ಖಾನ್ ಅವರು ವಿಶೇಷ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.
ಹಿಂದುಸ್ತಾನಿ ಕಲಾವಿದರಾದ ಶಾರದಾ ಭಟ್ ಕಟ್ಟಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಾತ್ಮಕ ಆಶಯಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಹುಟ್ಟಿದ ಸಂಸ್ಥೆ. ಧ್ವನಿ ಫೌಂಡೇಷನ್’ ಇದು ಕನ್ನಡ ಸಾಹಿತ್ಯದ ಆಳ ಅಧ್ಯಯನಕ್ಕೆ, ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿದೆ. ಜಾನಪದ ಹಾಗೂ ಶಾಸ್ತ್ರೀಯ ಕಲಾ ಪ್ರಕಾರಗಳ ಉಳಿವು ಹಾಗೂ ಬೆಳವಣಿಗೆಗಾಗಿ ಯೋಜನೆ ಹಾಕಿಕೊಂಡಿದೆ.
ಆ ನಿಟ್ಟಿನಲ್ಲಿ ಈಗಾಗಲೇ ಭರತನಾಟ್ಯ, ಸಂಗೀತ ಮತ್ತು ಚಿತ್ರಕಲಾ ತರಗತಿಗಳನ್ನು ನಡೆಸುತ್ತಿದೆ. ನುರಿತ ಕಲಾವಿದರನ್ನು ಅಧ್ಯಾಪಕರಾಗಿ ಇಲ್ಲಿ ನಿಯೋಜಿಸಲಾಗಿದೆ. ‘ಧ್ವನಿ ಫೌಂಡೇಷನ್’ ಸ್ತ್ರೀ ಸಬಲೀಕರಣಕ್ಕಾಗಿ ಕೂಡ ಕಾರ್ಯನಿರ್ವಹಿಸುತ್ತಿದೆ.
ಇದೀಗ ‘ಧ್ವನಿ ಫೌಂಡೇಷನ್’ ನ ಮಕ್ಕಳ ಸಂಗೀತ, ನೃತ್ಯ ಹಾಗೂ ಚಿತ್ರಕಲೆಯಂಥ ವಿವಿಧ ಚಟುವಟಿಕೆಗಳಿಗಾಗಿ ತರಗತಿ ಕೊಠಡಿಯೊಂದು ಸಿದ್ದಗೊಂಡಿದ್ದು ಅದಕ್ಕೆ ‘ಸ್ವರ ಕುಟೀರ’ ಎಂದು ಹೆಸರಿಸಲಾಗಿದೆ ಎಂದು ಧ್ವನಿ ಫೌಂಡೇಶನ್ ಸಂಸ್ಥಾಪಕಿ ಶ್ವೇತಾ ಮಡಪ್ಪಾಡಿ ತಿಳಿಸಿದ್ದಾರೆ.