ತ್ರಿವೇಣಿ ಸಂಗಮದಲ್ಲಿ 2025 ಫೆಬ್ರವರಿ 10, 11, 12 ರಂದು ನಡೆಯಲಿರುವ ಮಹಾ ಕುಂಭಮೇಳ

ಲೋಹಿತ್ ಹನುಮಂತಪ್ಪ:


ತ್ರಿವೇಣಿ ಸಂಗಮ ತಿರುಮಕೂಡಲು, ತಿ ನರಸೀಪುರ ತಾಲ್ಲೂಕಿನಲ್ಲಿ ದಿನಾಂಕ 10,11,ಮತ್ತು 12 ಫೆಬ್ರವರಿ2025 ರಲ್ಲಿ ನಡೆಯಲಿರುವ ಮಹಾ ಕುಂಭ ಮೇಳ ಕಾರ್ಯಕ್ರಮ ನಡೆಯಲಿದೆ ಇದರ ವಿಚಾರವಾಗಿ ಸುತ್ತೂರು ಶ್ರೀಗಳ ಅಧ್ಯಕ್ಷತೆಯಲ್ಲಿ ಹಲವು ಮಠಾಧಿಶರ ಸಮ್ಮುಖದಲ್ಲಿ , ಅಧಿಕಾರಿ ವರ್ಗದವರು ಜೊತೆ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು,

ಸಭೆಯಲ್ಲಿ ಕುಂಭಮೇಳದ ವಿಚಾರವಾಗಿ ಮಹತ್ವದ ಚರ್ಚೆ ನಡೆಸಲಾಯಿತು,
ಉತ್ತರಭಾರತದ ಪ್ರಯಾಗ, ಹರಿದ್ವಾರ, ನಾಸಿಕ, ಉಜ್ಜಯಿನಿಗಳಂತಹ ನದಿಸಂಗಮಕ್ಷೇತ್ರಗಳಲ್ಲಿ ಆಚರಣೆಯಲ್ಲಿರುವ ಮಹಾ ಕುಂಭಮೇಳಗಳಲ್ಲಿ ಕೋಟ್ಯಂತರ ಮಂದಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸಿ ಪುಣ್ಯಸ್ನಾನಮಾಡಿ ಧನ್ಯರಾಗುತ್ತಿದ್ದಾರೆ.

ಪುಣ್ಯಾರ್ಜನೆಯ ಈ ಸೌಭಾಗ್ಯದಿಂದ ದಕ್ಷಿಣಭಾರತದ ಭಕ್ತರು ವಂಚಿತರಾಗುತ್ತಿದ್ದುದನ್ನು ಮನಗಂಡ ನಮ್ಮ ಕನ್ನಡ ನಾಡಿನಹೆಮ್ಮೆಯ ಪೂಜ್ಯಪೀಠಾಧಿಪತಿಗಳಾದ ಶ್ರೀ ಕೈಲಾಸಾಶ್ರಮದ ಶ್ರೀತಿರು ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಜಗದ್ಗುರು ಪರಮಪೂಜ್ಯ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು, ಸುತ್ತೂರು ವೀರಸಿಂಹಾಸನಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು ಮತ್ತು ಶ್ರೀ ಓಂಕಾರಾಶ್ರಮ ಮಹಾಸಂಸ್ಥಾನದ ಶ್ರೀ ಶಿವಪುರಿಮಹಾಸ್ವಾಮಿಗಳು ತಿ ನರಸೀಪುರದ ‘ತ್ರಿವೇಣಿ ಸಂಗಮ’ ಕ್ಷೇತ್ರದಲ್ಲಿ ಪ್ರತಿ ಮೂರುವರ್ಷಗಳಿಗೊಮ್ಮೆ ‘ಕುಂಭಮೇಳ’ವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡರು.

ಅದರಂತೆ1989 ರಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭಿಸಿದರು. ಇದುವರೆವಿಗೂ ಹನ್ನೋಂದು ಕುಂಭಮೇಳಗಳು ವಿಜೃಂಭಣೆಯಿಂದ ನಡೆದಿವೆ. 2025ರಲ್ಲಿ ನಡೆಯುತ್ತಿರುವುದು12 ನೇ ಮಹಾಕುಂಭಮೇಳವಾಗಿದೆ.

“ತಿರುಮಕೂಡಲು ಶ್ರೀ ಕ್ಷೇತ್ರವು” ದಕ್ಷಿಣಗಂಗಾಎಂದೇ ಪ್ರಖ್ಯಾತವಾದ ಕಾವೇರಿನದಿ ಕಪಿಲಾ ಮತ್ತು ಗುಪ್ತಗಾಮಿನಿ ಸ್ಪಟಿಕಸರೋವರಗಳ ಸಂಗಮಕ್ಷೇತ್ರವೆನಿಸಿ, ಪುರಾಣೇತಿಹಾಸಗಳಲ್ಲಿ ಮಹತ್ವದ ಮನ್ನಣೆಗಳಿಸಿದೆ. ಇಲ್ಲಿನ ಎರಡೂ ದಂಡೆಗಳಲ್ಲಿರುವ ಅತ್ಯಂತ ಪ್ರಾಚೀನಕಾಲದ ಶ್ರೀ ಗುಂಜಾನರಸಿಂಹಸ್ವಾಮಿ ಆಗಸ್ತ್ಯ ಮುನಿಗಳು ಸ್ವತ:ತಾವೇ ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ಶ್ರೀ ಅಗಸ್ತೇಶ್ವರಸ್ವಾಮಿ ಶ್ರೀ ಹನುಮಂತೇಶ್ವರ ಸನ್ನಿಧಿಗಳು ವಿರಾಜಮಾನವಾಗಿವೆ. ಈ ಕ್ಷೇತ್ರವು ಗಂಗಾತಿರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟು ಹೆಚ್ಚಾದ ಪುಣ್ಯದನೆಲೆಯೆಂದು ಶ್ರೀ ಗುಂಜಾನರಸಿಂಹಸ್ವಾಮಿಯ ಹಸ್ತದಲ್ಲಿರುವ ತಕ್ಕಡಿಯು ಉದ್ಯೋಷಿಸುತ್ತಿದ್ದರೆ ಜೊತೆಗೆ ಅತ್ಯಂತ ಪ್ರಾಚೀನವಾದ ಇಲ್ಲಿನ ಶ್ರೀ ಭಾರದ್ವಾಜಋಷ್ಯಾಶ್ರಮ, ಶ್ರೀ ಚೌಡೇಶ್ವರಿದೇವಸ್ಥಾನ, ರುದ್ರಪಾದ, ಅಕ್ಷಯವಟವೃಕ್ಷ, ಆಶ್ವತ್ಥವೃಕ್ಷ, ಗುಡಿ- ಮಂಟಪಗಳು, ಶ್ರೀ ವ್ಯಾಸರಾಜಮಠ ಮೊದಲಾದವು ಈ ಕ್ಷೇತ್ರದ ಪ್ರಾಚೀನಪಾವಿತ್ರ್ಯತೆಯನ್ನು ನೂರ್ಮಡಿಗೊಳಿಸಿವೆ. ಅನೇಕ ಮತ – ಪಂಥ- ಧರ್ಮಗಳು ಏಕತ್ರ ಸಮ್ಮಿಲನಗೊಂಡು ಸರ್ವಧರ್ಮಗಳ ಸಂಗಮಕ್ಷೇತ್ರವೂ ಆಗಿ ಕಂಗೊಳಿಸುತ್ತಿದೆ.

ಇದೇ ಶ್ರೀ ಮನ್ಮಥ ನಾಮ ಸಂವತ್ಸರದಲ್ಲಿ ಈ ತ್ರಿವೇಣಿಸಂಗಮದಲ್ಲಿ ಹನ್ನೇರಡನೇಯ ಮಹಾಕುಂಭಮೇಳವು 2025 ಫೆಬ್ರವರಿ 10, 11. 12 ರಂದು ಘಟಿಸಿರುವುದು ಭಕ್ತರಪಾಲಿಗೆ ಪುಣ್ಯಪ್ರದವೇಆಗಿದೆ. ಜೊತೆಗೆ ಈ ಸಾಲಿನ ಕುಂಭಮೇಳಕ್ಕೆ ಲಭಿಸಿರುವ ಅಮೃತಮೂಹೂರ್ತ ಮಹೋದಯಪುಣ್ಯಸ್ನಾನಕ್ಕೆ ಅತ್ಯಂತ ಪ್ರಶಸ್ತವಾಗಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ 3 ದಿನಗಳ ಕಾಲ ನಡೆಯುವ ಈ ಪವಿತ್ರ ಉತ್ಸವವು ಯಾವುದೇ ಜಾತಿ- ಮತ – ಪಂಥಗಳ, ವರ್ಣ-ವರ್ಗಗಳ ಭೇದ-ಭಾವ ರಹಿತವಾಗಿ ಅತ್ಯಂತ ಸಡಗರ-ಸಂಭ್ರಮಗಳಿಂದ ಸರ್ವಜನಾಂಗದ ಶಾಂತಿ-ಸೌಹಾರ್ದಗಳ, ಸಂತೋಷ-ಸಾಮರಸ್ಯಗಳ ಸಂಗಮವಾಗಿದೆ.

ಇಲ್ಲಿನ ಪುಣ್ಯಸ್ನಾನದ ಸುಸಂದರ್ಭದಲ್ಲಿ ವಿಶ್ವಶಾಂತಿಗಾಗಿನದಿ ಸಂಗಮದ ನೆಲೆಯಲ್ಲಿ ಹೋಮ, ಹವನ, ಜಪ-ತಪ ಅಭಿಷೇಕ, ಪೂರ್ಣಾಹುತಿ ಮುಂತಾದ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ.

ಜೊತೆಗೆ ವಿವಿಧ ಧರ್ಮಾಚಾರ್ಯರ ಹಾಗೂ ಪ್ರಾಜ್ವರ ಧರ್ಮೋಪದೇಶಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೂ ಇಲ್ಲಿನ ಮಠಗಳು ಹಾಗೂ ಅನೇಕ ಸಂಘ-ಸಂಸ್ಥೆಗಳು ಅನ್ನದಾಸೋಹ” ವನ್ನೇರ್ಪಡಿಸಿವೆ ಸರ್ವರಿಗೂ ಸ್ವಾಗತವನ್ನುಕೋರಲಾಗಿದೆ.

Leave a Reply

Your email address will not be published. Required fields are marked *

You cannot copy content of this page