ನಂಜನಗೂಡು ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರ ಬಂಧನ

ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಒಂದು ಮಗು ಮಾರಾಟದ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹಲವು ಮಕ್ಕಳ ಮಾರಾಟದ ಸುಳಿವು ಲಭಿಸಿತ್ತು. ಪ್ರಕರಣದಲ್ಲಿ ಆರೋಪಿಗಳ ಜಾಲದ ಪತ್ತೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಅವರ ಸೂಚನೆಯಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್.ಆರ್ , ನಂಜನಗೂಡು ಉಪವಿಭಾಗ ಡಿಎಸ್ ಪಿ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ನಂಜನಗೂಡು ವೃತ್ತ ಸಿ.ಪಿ.ಐ ಲಕ್ಷ್ಮೀಕಾಂತ್ ಕೆ ತಳವಾರ್, ನಂಜನಗೂಡು ಪಟ್ಟಣ ಪಿ.ಎಸ್.ಐ ವಿಜಯ್‌ರಾಜ್, ಪಿಎಸ್‌ಐ ಚೆಲುವಯ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡದವರು ಗೃಹಿಣಿಯಾಗಿರುವ ಶ್ರೀಮತಿ @ ಸರಸ್ವತಿ @ ಶ್ರೀಮತಿ ಬಿ.ಸಿ ಕೊಂ ವೈನ್ ಚಂದ್ರಶೇಖರ್ (60), ನಂ 3689 , 03 ನೇ ಕ್ರಾಸ್ , ಆರ್ ಪಿ ರಸ್ತೆ , ನಂಜನಗೂಡು ಪಟ್ಟಣ , ಗೃಹಿಣಿ ಶ್ರೀಲಕ್ಷ್ಮಿ ಕೊಂ ರಾಮಮೋಹನ ( 31), ನಂ 3689 , 03 ನೇ ಕ್ರಾಸ್ , ಆರ್ ಪಿ ರಸ್ತೆ , ನಂಜನಗೂಡು ಪಟ್ಟಣ ಅವರುಗಳನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಲಾಗಿದೆ ಎಂದು ಎಸ್ಪಿ ಚೇತನ್ ಆರ್ ತಿಳಿಸಿದರು.

ವಿಚಾರಣೆ ಸಮಯದಲ್ಲಿ ಇವರುಗಳು ಜ್ಯೋತಿಯವರ ಗಂಡು ಮಗುವನ್ನು ಯಶೋದಮ್ಮ ಕೋಂ ಬಸವರಾಜು , ಉದ್ದೂರು ಹೊಸಳ್ಳಿ , ಹಳ್ಳಿ ಮೈಸೂರು ಹೋಬಳಿ , ಹೊಳೇನರಸೀಪುರ ತಾಲೂಕು ಅವರಿಗೆ ಹಣಕ್ಕಾಗಿ ಮಾರಾಟ ಮಾಡಿದ್ದು ತಿಳಿದು ಬಂದಿದೆ. ನಂತರ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಾಗೂ ಮಾಹಿತಿಯನ್ನು ಕಲೆ ಹಾಕಿದಾಗ ಈ ಆರೋಪಿಗಳು ಮಂಜುಳ ಕೋಂ ಮನೋಜ್ ಅವರಿಗೆ ಜನಿಸಿದ ಹೆಣ್ಣು ಮಗುವನ್ನು ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಚೈತ್ರಾ ಕೋರಿ ಉಮೇಶ ಅವರಿಗೆ ಹಣಕ್ಕಾಗಿ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ . ಈ ಮಕ್ಕಳನ್ನು ಮೈಸೂರಿನ ಬಾಪೂಜಿ ಮಕ್ಕಳ ಆರೈಕೆ ಕೇಂದ್ರದಲ್ಲಿಡಲಾಗಿರುತ್ತದೆ. ಈ ಪ್ರಕರಣದ ಸಂಬಂಧ ಶ್ರೀಮತಿ @ ಸರಸ್ವತಿ ಹಾಗೂ ಅವರ ಪುತ್ರಿ ಶ್ರೀಲಕ್ಷ್ಮಿ ಅವರುಗಳನ್ನು ಬಂಧಿಸಲಾಗಿರುತ್ತದೆ .

ಆರೋಪಿತರು ಮಕ್ಕಳಿಲ್ಲದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಡತನದಲ್ಲಿರುವ ಗರ್ಭಿಣಿಯವರನ್ನು ಪರಿಚಯ ಮಾಡಿಕೊಂಡು ಪೂರ್ವ ನಿಯೋಜಿತವಾಗಿ ಮಕ್ಕಳಿಲ್ಲದವರಿಗೆ ಮಗುವನ್ನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಎಸ್.ಎಲ್.ಇ.ಎಸ್ ಆಸ್ಪತ್ರೆಯಲ್ಲಿ ಗರ್ಭಿಣಿಯ ಹೆಸರಿಗೆ ಬದಲಾಗಿ ಮಕ್ಕಳನ್ನು ಪಡೆಯುವವರ ಹೆಸರಿಗೆ ಆಸ್ಪತ್ರೆಯ ದಾಖಲೆಗಳನ್ನು ಸೃಷ್ಟಿಸಿರುವುದು ಸಹ ತನಿಖೆಯಲ್ಲಿ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಪ್ರಕರಣ ಮೊ.ನಂ 74/2021 ಗೆ ಕಲಂ 37 ( 4 ) , 465 , 468 , 471 , 419 , 420 ಐಪಿಸಿ ಅಳವಡಿಸಿ ತನಿಖೆ ಕೈಗೊಳ್ಳಲಾಗಿತ್ತು . ಈ ಪ್ರಕರಣದಲ್ಲಿ ಭಾಗಿಯಾದವರ ಪತ್ತೆ ಮುಂದುವರೆದಿರುತ್ತದೆ . ಮಕ್ಕಳು ಮಾರಾಟವಾಗಿರುವ ಸಾಧ್ಯತೆಗಳು ಇದ್ದು ಆ ಮಕ್ಕಳ ಪತ್ತೆ ಮತ್ತು ರಕ್ಷಣೆ ಕಾರ್ಯಕ್ಕೆ ತಂಡಗಳನ್ನು ನೇಮಿಸಿದ್ದು ಪತ್ತೆ ಕಾರ್ಯ ಮುಂದುವರೆದಿರುತ್ತದೆ ಎಂದು ತಿಳಿಸಿದರು.

ಪ್ರಕರಣದ ಭೇದಿಸುವಲ್ಲಿ ಭಾಗಿಯಾಗಿದ್ದ ಲಕ್ಷ್ಮೀಕಾಂತ್ ಕೆ ತಳವಾರ್ ಸಿ.ಪಿ.ಐ ನಂಜನಗೂಡು ವೃತ್ತ , ವಿಜಯ್‌ರಾಜ್ ಪಿ.ಎಸ್.ಐ ನಂಜನಗೂಡು ಪಟ್ಟಣ , ಚೆಲುವರಾಜು ಪಿಎಸ್‌ಐ , ಅಫೀಜುಲ್ಲಾ ಷರೀಫ್ ಎ.ಎಸ್.ಐ , ಅಜ್ಜಯ್ಯ , ಸುಶೀಲ್ ಕುಮಾರ್ , ಸುನಿತಾ , ನಳಿನಾಕ್ಷಿ ಅವರುಗಳ ಕಾರ್ಯವನ್ನು ಶ್ಲಾಘಿಸಿದರು.

Leave a Reply

Your email address will not be published. Required fields are marked *

You cannot copy content of this page